ರಂಗಾರೆಡ್ಡಿ/ತೆಲಂಗಾಣ: ರಂಗಾರೆಡ್ಡಿ ಜಿಲ್ಲೆಯ ಮಾನವ ಕಳ್ಳಸಾಗಣೆ ವಿರೋಧಿ ಘಟಕ (ಎಹೆಚ್‌ಟಿಯು)ವು 15 ಬಾಲಕಾರ್ಮಿಕರನ್ನು ರಕ್ಷಿಸಿದೆ. ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಕಂಪೆನಿ ಹಾಗೂ ಹಯಾತ್ ನಗರದ ಕಲಾನಗರ ಮತ್ತು ಪಸುಮಮುಲಾ ಗ್ರಾಮದ ಮದ್ಯದ ಬಾಟಲ್ ಸ್ವಚ್ಛಗೊಳಿಸುವ ಘಟಕದಲ್ಲಿ ಕೆಲಸ ಮಾಡುತ್ತಿದ್ದ 15 ಮಂದಿ ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಶಿವಾ ಟ್ರೇಡರ್ಸ್ ಮೇಲೆ ದಾಳಿ ನಡೆಸಿ ಅದರ ಮಾಲೀಕ ಚನ್ನಬಾತಿನಾ ರವಿ (30) ಎಂಬಾತನನನ್ನು ಬಂಧಿಸಲಾಗಿದೆ. ಮದ್ಯದ ಖಾಲಿ ಬಾಟಲಿಗಳನ್ನು ತೊಳೆಯುವ ಕೆಲಸ ಮಾಡುವ ಶಿವಾ ಟ್ರೇಡರ್ಸ್ನಲ್ಲಿ 8 ರಿಂದ 15 ವರ್ಷದೊಳಗಿನ ಮಕ್ಕಳನ್ನು ಬಲವಂತವಾಗಿ ಕರೆತಂದು ಕೆಲಸಕ್ಕೆ ಹಚ್ಚಲಾಗಿತ್ತು. ಮಕ್ಕಳು ಅತ್ಯಂತ ಅಪಾಯಕಾರಿಯಾದ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಇದೇ ಗ್ರಾಮದ ಐವರು ಬಾಲಕಿಯರನ್ನು ಸಹ ರಕ್ಷಿಸಲಾಗಿರುವುದು ಗಮನಾರ್ಹ.
ಮತ್ತೊಂದು ಪ್ರಕರಣದಲ್ಲಿ, ಮಾನವ ಕಳ್ಳಸಾಗಣೆ ವಿರೋಧಿ ಘಟಕದ ತಂಡದವರು ಪ್ಲ್ಯಾಸ್ಟರ್ ಕಂಪನಿ ಮೇಲೆ ದಾಳಿ ಮಾಡಿ 9 ಬಾಲಕರು ಮತ್ತು ಒಬ್ಬ ಬಾಲಕಿ ಸೇರಿದಂತೆ 10 ಮಕ್ಕಳನ್ನು ರಕ್ಷಿಸಿದ್ದಾರೆ. ಈ ಬಾಲ ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ತೆಲಂಗಾಣ: ವಿದ್ಯುತ್ ಸ್ಪರ್ಶಿಸಿ ನಾಲ್ವರು ಸಾವು
ಎಲ್ಲ ಮಕ್ಕಳನ್ನು ಕಂಪೆನಿಗಳ ಆವರಣದಲ್ಲಿ ಇರುವ ಶೆಡ್‌ಗಳಲ್ಲಿ ಬಂಧಿಸಿ ಕಾರ್ಮಿಕ ಕಾನೂನುಗಳಿಗೆ ವಿರುದ್ಧವಾಗಿ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.