ನವದೆಹಲಿ: ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರನ್ನು ತಮ್ಮ ಊರಿಗೆ ಸ್ಥಳಾಂತರಿಸಲು ಆರಂಭಿಸಲಾಗಿರುವ ಶ್ರಮಿಕ್ ವಿಶೇಷ ರೈಲುಗಳ ಮೂಲಕ 12 ಲಕ್ಷ ಪ್ರಯಾಣಿಕರು ತಮ್ಮ ತವರು ರಾಜ್ಯಗಳನ್ನು ತಲುಪಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಮೇ 1ರಂದು ಕೇವಲ 4 ರೈಲುಗಳಿಂದ ಪ್ರಾರಂಭಿಸಿ 15 ದಿನಗಳಲ್ಲಿ ಭಾರತೀಯ ರೈಲ್ವೆ 1 ಸಾವಿರಕ್ಕೂ ಹೆಚ್ಚು ರೈಲುಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. 'ಮೇ 1ರಂದು ಶ್ರಮಿಕ್ ರೈಲುಗಳು ಕೇವಲ 5 ಸಾವಿರ ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದ್ದವು. ಇದೀಗ 12 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ರಾಜ್ಯಗಳಿಗೆ ತಲುಪಿದ್ದಾರೆ' ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಮೇ 14ರಂದು ವಿವಿಧ ರಾಜ್ಯಗಳಿಂದ ಒಟ್ಟು 145 ಶ್ರಮಿಕ್ ವಿಶೇಷ ರೈಲುಗಳಲ್ಲಿ 2.10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ತಮ್ಮ ರಾಜ್ಯಗಳಿಗೆ ತಲುಪಿಸಲಾಯಿತು. ಇದೇ ಮೊದಲ ಬಾರಿಗೆ ಶ್ರಮಿಕ್ ರೈಲುಗಳಲ್ಲಿನ ಪ್ರಯಾಣಿಕರ ಸಂಖ್ಯೆ 2 ಲಕ್ಷ ದಾಟಿದೆ.
ರಾಜ್ಯ ಸರ್ಕಾರಗಳೊಂದಿಗೆ ರೈಲ್ವೆ ಇಲಾಖೆ ಸಮನ್ವಯ ಸಾಧಿಸಿ ದಿನಕ್ಕೆ 300 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ಸಜ್ಜಾಗಿದೆ. ಈ ಮೂಲಕ ಒಂದೇ ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ವಲಸಿಗರನ್ನು ಮನೆಗೆ ಹಿಂತಿರುಗಿಸುವ ಉದ್ದೇಶ ಹೊಂದಿದೆ.