ಬೀಜಿಂಗ್(ಚೀನಾ) : ಧಾರಾಕಾರ ಮಳೆಯಿಂದಾಗಿ ಚೀನಾದ ನೈರುತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿ, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಚೀನಾದ ಪ್ರಮುಖ ನದಿಗಳ ಮೂಲವಾದ ಟಿಬೇಟ್‌ನ ಪ್ರಸ್ಥಭೂಮಿಯಲ್ಲಿ ಪರ್ವತದ ಕೆಳಗಿರುವ ಹಳ್ಳಿಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಜನ ಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಿಹೈ ಟೌನ್‌ಶಿಪ್‌ನಲ್ಲಿ ಶುಕ್ರವಾರ ಹಾಗೂ ಶನಿವಾರ ಬಿರುಗಾಳಿ ಸಹಿತ ಮಳೆ ಬಿದ್ದಿದೆ. ಈ ವೇಳೆ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿತ್ತು. ಈಗ ಸಾವು ನೋವಿನ ವರದಿಯಾಗಿದೆ. ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆಂದು ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಪ್ರವಾಹದಿಂದ ಹಲವೆಡೆ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಹೆದ್ದಾರಿಗಳು ನೀರಿನಲ್ಲಿ ಮುಳುಗಿವೆ. ಅಪಾರವಾದ ಬೆಳೆ ಹಾನಿ ಸಂಭವಿಸಿದೆ. ಸುಮಾರು 7.705 ಮಂದಿಯನ್ನ ಪ್ರವಾಹ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಪ್ರತಿ ವರ್ಷ ಇದೇ ಋತುಮಾನದಲ್ಲಿ ಚೀನಾದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಡುತ್ತದೆ ಎನ್ನಲಾಗುತ್ತಿದೆ. ಸರ್ಕಾರ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದೆ.