ಹಜಾರಿಬಾಗ್: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಬಂದ 110 ವರ್ಷ ವಯಸ್ಸಿನ ವೃದ್ಧೆಯೊಬ್ಬರ ಬಳಿ ಗುರುತಿನ ಚೀಟಿ ಇಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಮತಚಲಾಯಿಸಲು ನಿರಾಕರಿಸಿದ ಘಟನೆ ಹಜಾರಿಬಾಗ್ನ ಮತಕೇಂದ್ರ ಸಂಖ್ಯೆ 450 ರಲ್ಲಿ ನಡೆದಿದೆ.
ಉತ್ಸಾಹದಿಂದ ಮತಚಲಾಯಿಸಲು ಬಂದ, ನಡೆಯಲೂ ಸಾಧ್ಯವಾಗದ 110 ವಯಸ್ಸಿನ ವೃದ್ಧೆಯೊಬ್ಬರು ತಮ್ಮ ಹಕ್ಕು ಚಲಾಯಿಸಲು ಒಂದು ಗಂಟೆ ಕಾಲ ಮತಗಟ್ಟೆ ಹೊರಗೇ ಕಾದಿದ್ದಾರೆ. ಅವರ ಬಳಿ ಗುರುತಿನ ಚೀಟಿ ಇಲ್ಲದಿದ್ದರೂ ಸಹ ಮತದಾರನ ಕುರಿತು ಮಾಹಿತಿ ಇರುವ ಸ್ಲಿಪ್ ಇದ್ದು, ಅದರಲ್ಲಿ ಕ್ಯೂಆರ್ ಕೋಡ್ ಕೂಡ ಇತ್ತು. ಆದರೆ ಮತಚಲಾಯಿಸಲು ಗುರುತಿನ ಚೀಟಿಯೇ ಬೇಕೆಂದು ಮತಗಟ್ಟೆ ಅಧಿಕಾರಿ ತಿಳಿಸಿದ್ದು, ವೃದ್ಧೆಗೆ ಅವಕಾಶ ನೀಡಲಿಲ್ಲ.
ಅಜ್ಜಿಯ ಸಂಬಂಧಿಕರು ಗುರುತಿನ ಚೀಟಿ ತಂದು ಕೊಟ್ಟ ಬಳಿಕ ಮತದಾನ ಮಾಡಲು ಅವಕಾಶ ನೀಡಬೇಕಾಯಿತು. ಹೀಗಾಗಿ ಒಂದು ಗಂಟೆ ಕಾಲ ಕಾದು ಬಳಿಕ ಮತದಾನ ಮಾಡಿದ್ದಾರೆ. ಹೀಗಾಗಿ ಮತಗಟ್ಟೆ ಅಧಿಕಾರಿಗಳ ವಿರುದ್ಧ ಅಜ್ಜಿಯ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಒಟ್ಟು 81 ಕ್ಷೇತ್ರಗಳಲ್ಲಿ ಇಂದು 17 ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆದಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 309 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಡಿಸೆಂಬರ್ 23ರಂದು ನಡೆಯುವ ಮತ ಎಣಿಕೆಯಲ್ಲಿ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.