ನವದೆಹಲಿ : ತಬ್ಲಿಘಿ ಜಮಾತ್ ಕಾರ್ಯಕ್ರಮವನ್ನು ಆಯೋಜಿಸಿರುವ ಮೌಲಾನಾ ಸಾದ್ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದಾನೆ. ಕೊರೊನಾ ವೈರಸ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಧಾರ್ಮಿಕ ಸಭೆ ಆಯೋಜಿಸಿದ್ದಕ್ಕೆ ಸಾದ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ವರದಿಗಳ ಪ್ರಕಾರ, ಜೂನ್‌ನಲ್ಲಿ ಸಾದ್ ಅವರು ಜಕೀರ್ ನಗರದ ತಮ್ಮ ನಿವಾಸದಿಂದ ಹೊರ ಬಂದಿದ್ದಾರೆ. ಅವರ ಚಿತ್ರವನ್ನು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ತಬ್ಲಿಘಿ ಮುಖ್ಯಸ್ಥ ನಿಜಕ್ಕೂ ದೆಹಲಿಯಲ್ಲಿದ್ದಾನೆ ಎಂದು ದೃಢಪಡಿಸಿದೆ. ಆತನ ವಿರುದ್ಧ ಎಫ್‌ಐಆರ್ ದಾಖಲಾಗಿ 110 ದಿನಗಳು ಕಳೆದರೂ, ದೆಹಲಿ ಪೊಲೀಸರ ಅಪರಾಧ ವಿಭಾಗವು ಸಾದ್‌ನನ್ನು ಇನ್ನೂ ಪ್ರಶ್ನಿಸಿಲ್ಲ.
ದೆಹಲಿ ಪೊಲೀಸ್ ಅಪರಾಧ ವಿಭಾಗವು ಮಾರ್ಚ್ 31ರಂದು ಧರ್ಮಗುರು ಸೇರಿ ಏಳು ಜನರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ನಿಜಾಮುದ್ದೀನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಸಭೆಯನ್ನು ಆಯೋಜಿಸಿದ್ದಕ್ಕಾಗಿ ದೂರು ನೀಡಿದ್ದರು. ನಂತರ, ಭಾರತೀಯ ದಂಡ ಸಂಹಿತೆ ಸೆಕ್ಷನ್ 304ರ ಅಡಿ ಎಫ್ಐಆರ್ ಹಾಕಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವು ವಿದೇಶಿಯರ ಮೇಲೆ ವೀಸಾ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ ಧಾರ್ಮಿಕ ಸಭೆಗಳಿಗೆ ನಿರ್ಬಂಧ ಹೇರಿದ್ದರೂ, ಮಾರ್ಚ್ 23ರಂದು ಸುಮಾರು 2,300 ಜನರು ಮಾರ್ಕಾಜ್ ನಿಜಾಮುದ್ದೀನ್ನಲ್ಲಿ ಸಭೆ ಸೇರಿದ್ದರು. ಅವರಲ್ಲಿ ಹಲವರು ಕೊರೊನಾ ವೈರಸ್ಗೆ ತುತ್ತಾಗಿದ್ದರು. ಮಾರ್ಚ್ 1ರಿಂದ ವಿದೇಶಿಯರು ಸೇರಿದಂತೆ 9,000 ಜನರು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.