ಚೆನ್ನೈ: ಕೇವಲ 22ನೇ ವಯಸ್ಸಿನಲ್ಲಿ ಬರೋಬ್ಬರಿ 11 ಮದುವೆಯಾಗಿ ವಂಚನೆ ಮಾಡಿದ್ದೇನೆ ಎಂದು ಯುವಕನೋರ್ವ ಹೇಳಿಕೊಂಡಿದ್ದು,ಈ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಫೇಸ್ಬುಕ್ ಖಾತೆ ಬಳಸಿಕೊಂಡು ಮದುವೆಯಾದ ಮಹಿಳೆಯರು ಹಾಗೂ ಹದಿಹರೆಯದ ಹುಡುಗಿಯರಿಗೆ ವಂಚನೆ ಮಾಡಿದ್ದಾನೆ.
ಬಂಧಿತ ಆರೋಪಿಯನ್ನು ಲವ್ಲಿ ಗಣೇಶ್ ಎಂದು ಗುರುತಿಸಲಾಗಿದ್ದು, ಈತ ಚೆನ್ನೈನ ವಿಲ್ಲಿವಾಕಂನ ರಾಜಾಜಿನಗರದವನಾಗಿದ್ದು, ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.
20 ವರ್ಷದ ಮಹಿಳೆ 2017ರಲ್ಲಿ ಫೇಸ್ಬುಕ್ ಮೂಲಕ ಪರಿಚಯವಾಗಿದ್ದು, ಆತನೊಂದಿಗೆ ಪ್ರೀತಿಯ ಬಲೆಗೆ ಬಿದ್ದು ಡಿಸೆಂಬರ್ 5ರ 2020ರಂದು ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಮದುವೆಯಾಗಿದ್ದಾರೆ. ತದನಂತರ ಆಕೆಯನ್ನು ಪ್ರತ್ಯೇಕ ಸ್ಥಳದಲ್ಲಿಟ್ಟಿದ್ದಾನೆ. ಹೆತ್ತವರಿಗೆ ಇದರ ಬಗ್ಗೆ ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ ಆಕೆ ವಯಸ್ಕಳಾದ ಕಾರಣ ಆತನೊಂದಿಗೆ ಜೀವನ ನಡೆಸಲು ಅನುಮತಿ ನೀಡಿದ್ದಾರೆ.
ಓದಿ: ಫೇಸ್ಬುಕ್ನಲ್ಲಿ ಪರಿಚಯ, ನಂತರ ಪ್ರೇಮ; ಮದುವೆಯಾಗಿ 9 ತಿಂಗಳ ಬಳಿಕ ಕೈಕೊಟ್ಟ ಭೂಪ
ರಾಜಾಜಿ ನಗರದಲ್ಲಿ ಮನೆ ಬಾಡಿಗೆ ಮಾಡಿ ಗಂಡ-ಹೆಂಡತಿಯಾಗಿ ಜೀವನ ನಡೆಸಲು ಆರಂಭಿಸಿದ್ದಾರೆ. ಇದಾದ ಬಳಿಕ 17 ವರ್ಷದ ಬಾಲಕಿಯನ್ನು ಮನೆಗೆ ಕರೆತಂದಿದ್ದು, ಆಕೆ ತಮ್ಮ ಮನೆ ಸೇವಕಿ ಎಂದು ಹೇಳಿದ್ದಾನೆ. ಆದರೆ ಬಾಲಕಿ ಜತೆ ದೈಹಿಕ ಸಂಬಂಧ ಬೆಳೆಸಿದ್ದರಿಂದ ಪತ್ನಿಗೆ ಅನುಮಾನ ಶುರುವಾಗಿದೆ. ಇದರ ಬಗ್ಗೆ ಹೆಂಡತಿ ಪ್ರಶ್ನೆ ಮಾಡಿದಾಗ ಆಕೆಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾನೆ. ಜತೆಗೆ ಅಲ್ಕೋಹಾಲ್ ಸೇವನೆ ಮಾಡಿ ಕೈಗಳನ್ನ ಹಗ್ಗಗಳಿಂದ ಕಟ್ಟಿ ಹಾಕಿ ಮೇಲಿಂದ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಇದರ ಜತೆಗೆ ತಾನು ಇಲ್ಲಿಯವರೆಗೆ 11 ಹುಡುಗಿಯರನ್ನು ಮದುವೆಯಾಗಿದ್ದಾಗಿ ತಿಳಿಸಿದ್ದು, ಕೆಲವೊಂದು ಅಶ್ಲೀಲ ವಿಡಿಯೋ ತೋರಿಸಿದ್ದಾನೆ. ಈ ವೇಳೆ ಸಂತ್ರಸ್ತೆ ಆತನಿಂದ ತಪ್ಪಿಸಿಕೊಂಡು ವಿಲ್ಲಿವಾಕಂ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಗಣೇಶನನ್ನು ಬಂಧಿಸಿದ್ದು, ಪೋಕ್ಸೋ ಸೇರಿದಂತೆ ವಿವಿಧ ಕಲಂ ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ.