ನವದೆಹಲಿ: ಕೊರೊನಾದ ಹೊಸ ರೂಪಾಂತರಗಳಿಗೆ ಅಭಿವೃದ್ಧಿಪಡಿಸಿದ ಲಸಿಕೆಯ ಅವಶ್ಯಕತೆ ಇದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ತಿಳಿಸಿದ್ದಾರೆ. ಕೋವಿಡ್‌ನ ಹೊಸ ರೂಪಾಂತರಗಳಿಗೆ ಬೂಸ್ಟರ್ ಶಾಟ್ಸ್/ಡೋಸ್ (ಪರಿಣಾಮಕಾರಿ ಡೋಸ್) ಬೇಕಾಗಬಹುದು. ಸಮಯ ಕಳೆದಂತೆ ರೋಗನಿರೋಧಕ ಶಕ್ತಿ ಕುಸಿಯುತ್ತದೆ, ಹಾಗಾಗಿ ಲಸಿಕೆಯ ಅಭಿವೃದ್ಧಿ ಅಗತ್ಯ ಎಂದು ಗುಲೇರಿಯಾ ಹೇಳಿದ್ದಾರೆ.
ಬೂಸ್ಟರ್ ಡೋಸ್ ಎರಡನೇ ತಲೆಮಾರಿನ ಲಸಿಕೆ. ಈ ಲಸಿಕೆ ಉತ್ತಮ ರೋಗನಿರೋಧಕ ಶಕ್ತಿ ಹೊಂದಿದ್ದು, ವಿವಿಧ ರೀತಿಯ ರೂಪಾಂತರಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಎಂದು ಹೇಳಿದರು. ಬೂಸ್ಟರ್ ಶಾಟ್ಸ್ಗಳ( ಹೆಚ್ಚುವರಿ ಬಲ ವರ್ಧಕ ಲಸಿಕೆ) ಪ್ರಯೋಗ ನಡೆಯುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇಡೀ ಜನಸಂಖ್ಯೆಯ ಲಸಿಕೆ ಪೂರ್ಣಗೊಂಡ ನಂತರವೇ ಬೂಸ್ಟರ್ ಡೋಸ್ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಡಾ ಗುಲೇರಿಯಾ ಹೇಳಿದರು.
ಮಕ್ಕಳಿಗಾಗಿ ಲಸಿಕೆ:
ಲಸಿಕೆ ತಯಾರಿಕ ಸಂಸ್ಥೆಯಾದ ಭಾರತ್ ಬಯೋಟೆಕ್ ಮಕ್ಕಳಿಗಾಗಿ ಲಸಿಕೆ ತಯಾರಿಸುವ ಪ್ರಕ್ರಿಯೆಯಲ್ಲಿದೆ. ಪ್ರಯೋಗದ ಫಲಿತಾಂಶಗಳು ಸೆಪ್ಟೆಂಬರ್ ವೇಳೆಗೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಈ ಪ್ರಯೋಗವನ್ನು ಮೂರು ಹಂತಗಳಲ್ಲಿ ಮಾಡಲಾಗುತ್ತಿದೆ. ಇದರಲ್ಲಿ ವಿವಿಧ ವಯಸ್ಸಿನ ಮಕ್ಕಳನ್ನು ವರ್ಗೀಕರಿಸಲಾಗಿದೆ. ಮೊದಲ ಪ್ರಯೋಗ 12-18 ವರ್ಷ ವಯಸ್ಸಿನವರಿಗೆ ಮಾಡಲಾಯಿತು.
ನಂತರ 6-12 ವರ್ಷದೊಳಗಿನವರಲ್ಲಿ ಮತ್ತು ಈಗ 2-6 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಯುತ್ತಿದೆ. 12-18 ವರ್ಷದೊಳಗಿನವರಿಗೆ ಲಸಿಕೆ ಸಂಬಂಧ ಪ್ರಯೋಗಗಳನ್ನು ಪೂರ್ಣಗೊಳಿಸಿದ್ದು, ತುರ್ತು ಬಳಕೆಗಾಗಿ ಅನುಮೋದನೆ ಕೋರಿದ್ದಾರೆ.
ಇನ್ನೂ ಅಹಮದಾಬಾದ್ ಮೂಲದ ಕಂಪನಿಯು ಮೂರು - ಡೋಸ್ ಲಸಿಕೆ ಸಿದ್ಧಪಡಿಸಿದೆ. ಇದು ವಿಶ್ವದ ಮೊದಲ ಪ್ಲಾಸ್ಮೋಯಿಡ್ ಲಸಿಕೆಯಾಗಿದ್ದು ಶೀಘ್ರದಲ್ಲೇ ಡಿಸಿಜಿಐನಿಂದ ಅನುಮೋದನೆ ಪಡೆಯುವ ನಿರೀಕ್ಷೆಯಿದೆ.