ಹೈದರಾಬಾದ್ : ಕೊರೊನಾ ವೈರಸ್ ತಟಸ್ಥಗೊಳಿಸುವಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಹೇಳಿತು.
ಲಸಿಕೆ ಪರಿಣಾಮಕಾರಿತ್ವದ ಕುರಿತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ದೇಶದಲ್ಲಿ ನಡೆಸಿದ ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಆಂತರಿಕ ಸುರಕ್ಷತೆ ಮತ್ತು ರೋಗ ನಿರೋಧಕತೆ ಕುರಿತು ಮಾಹಿತಿ ನೀಡಿದರು.
ಜೊತೆಗೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಸಂಬಂಧಿಸಿದ ಸುರಕ್ಷತೆ ಮತ್ತು ಗಂಭೀರ ಪ್ರತಿಕೂಲ ಘಟನೆಗಳ ಬಗ್ಗೆಯೂ ವಿವರಿಸಿದ ಅವರು ಇದು ನಮ್ಮ ದೇಶದ ದೊಡ್ಡ ಸಾಧನೆ ಎಂದು ಗುಣಗಾನ ಮಾಡಿದರು. ಈ ಕುರಿತು ತಜ್ಞರ ತಂಡ ಸಮಾಲೋಚಿಸಿದ ಡೇಟಾವನ್ನು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಪರಿಶೀಲಿಸಿದೆ.
ಸಂಪೂರ್ಣ ಚರ್ಚಿಸಿದ ನಂತರವೇ ಅನುಮತಿ : ವ್ಯಾಪಕವಾದ ಕ್ಲಿನಿಕಲ್ ಪ್ರಯೋಗಗಳಿಗಾಗಿ ಈಗಾಗಲೇ 25,800 ಹೆಸರುಗಳು ನೋಂದಣಿಯಾಗಿವೆ. ಬಯೋಟೆಕ್ ಕಂಪನಿಯು 'ಮಾನವೇತರ ಪ್ರೈಮೇಟ್ ಚಾಲೆಂಜ್ ಅಧ್ಯಯನ'ದಲ್ಲಿ ಬಿಡುಗಡೆಯಾದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ದತ್ತಾಂಶವನ್ನು ಸಿಡಿಎಸ್‌ಒಗೆ ಸಲ್ಲಿಸಿದೆ ಎಂದರು.
ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದನ್ನು ಪರೀಕ್ಷೆಗಳು ತೋರಿಸಿಕೊಟ್ಟಿವೆ. ಪೂರ್ಣ ಪ್ರಮಾಣದ ಮಾತುಕತೆಗಳ ನಂತರ, ಸಾರ್ವಜನಿಕ ಹಿತಾಸಕ್ತಿಯಲ್ಲಿ ತುರ್ತು ಸಂದರ್ಭದಲ್ಲಿ ಅದನ್ನು ಸೀಮಿತ ಕ್ಲಿನಿಕಲ್ ಪ್ರಯೋಗ ವ್ಯವಸ್ಥೆಯಲ್ಲಿ ಬಳಸಲು ಅನುಮತಿಸಲಾಗಿದೆ ಎಂದು ವಿವರಿಸಿದರು.
15 ದಿನಕ್ಕೊಮ್ಮೆ ವಿವರ : ಭಾರತದ ಬಯೋಟೆಕ್ ಕಂಪನಿಯು 'ಅಡ್ವರ್ಸ್ ಈವೆಂಟ್ ಫಾಲೋಯಿಂಗ್ ಇಮ್ಯುನೈಜೇಷನ್ (ರೋಗನಿರೋಧಕತೆ ನಂತರದ ಪ್ರತಿಕೂಲ ಘಟನೆ-ಎಇಎಫ್‌ಐ), ಅಡ್ವರ್ಸ್ ಈವೆಂಟ್ಸ್ ಆಫ್ ಸ್ಪೆಷಲ್ ಇಂಟ್ರೆಸ್ಟ್ (ಎಇಎಸ್‌ಐ) ಪ್ರತಿಕೂಲ ಘಟನೆಗಳಿಗೆ ಸಂಬಂಧಿಸಿದಂತೆ 15 ದಿನಗಳಿಗೊಮ್ಮೆ ಸುರಕ್ಷತಾ ಡೇಟಾವನ್ನು ಮಾಹಿತಿ ಸಲ್ಲಿಸಬೇಕಾಗುತ್ತದೆ.
ಗಂಭೀರ ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗೆ ಸರ್ಕಾರ ಸೂಚಿಸಿದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ, ಕಂಪನಿಯೇ ಅದರ ಜವಾಬ್ದಾರಿ ತೆಗೆದುಕೊಳ್ಳಲಿದೆ ಎಂದರು.