ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಭಾರತವನ್ನು ಯಾವುದೇ ಕಾರಣಕ್ಕೂ ತಾಲಿಬಾನ್ ರೀತಿ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.
ಭವಾನಿಪುರ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಬ್ಯಾನರ್ಜಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾತನಾಡಿದ್ದು, ಟಿಎಂಸಿ ನೇತೃತ್ವದ ಬಂಗಾಳ ಸರ್ಕಾರ ದುರ್ಗಾಪೂಜೆ ಹಾಗೂ ಲಕ್ಷ್ಮೀ ಪೂಜೆ ಆಚರಣೆ ಮಾಡಲು ಬಿಡುತ್ತಿಲ್ಲ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ ಎಂದರು.
ಬಿಜೆಪಿ ಒಂದು ಜುಮ್ಲಾ ಪಕ್ಷ. ನರೇಂದ್ರ ಮೋದಿಜೀ, ಅಮಿತ್ ಶಾ ಜೀ, ನಾವು ಯಾವುದೇ ಕಾರಣಕ್ಕೂ ಭಾರತವನ್ನು ತಾಲಿಬಾನ್ ರೀತಿ ಆಗಲು ಬಿಡಲ್ಲ. ಭಾರತ ಯಾವಾಗಲೂ ಒಗ್ಗಟ್ಟಿನಿಂದ ಇರಲಿದೆ. ನಾವೆಲ್ಲರೂ ಇಲ್ಲಿ ಒಗ್ಗಟ್ಟಿನಿಂದ ಜೀವನ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಒಡೆಯಲು ಬಿಡಲ್ಲ ಎಂದಿದ್ದಾರೆ.
ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಭೇಟಿ ಮಾಡಿದ ಬಿಂದ್ರಾ: 'ಟೋಕಿಯೋ' ಹೆಸರಿನ ಸ್ಪೆಷಲ್ ಗಿಫ್ಟ್ ಕಾಣಿಕೆ
ಮಮತಾ ವಿರುದ್ಧ ಬಿಜೆಪಿ ವಾಗ್ದಾಳಿ
ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕಿಳಿದಿರುವ ಪ್ರಿಯಾಂಕಾ ಟಿಬ್ರೆವಾಲ್ ಪರ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಲು ಟಿಎಂಸಿ ಅವಕಾಶ ನೀಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಅಕ್ಕಪಕ್ಕ ಪ್ರಚಾರ ನಡೆಸಲು ಅವಕಾಶ ಮಾಡಿಕೊಡುತ್ತಿಲ್ಲ ಎಂದಿದೆ. ಸೆಪ್ಟೆಂಬರ್ 30ರಂದು ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 3ರಂದು ಫಲಿತಾಂಶ ಹೊರಬೀಳಲಿದೆ.