ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನಲ್ಲಿ ರೈಸ್ ಪುಲ್ಲಿಂಗ್ ಗ್ಯಾಂಗ್ವೊಂದನ್ನು ಬೆಂಗಳೂರು ಪೊಲೀಸರು ಪತ್ತೆ ಹೆಚ್ಚಿದ್ದು, ಈ ಗ್ಯಾಂಗ್ ಮಹಿಳೆ ಸೇರಿದಂತೆ 15 ಮಂದಿಯಿಂದ 5 ಕೋಟಿಗೂ ಅಧಿಕ ಹಣ ವಸೂಲಿ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ.
ರೈಸ್ ಪುಲ್ಲಿಂಗ್ ಗ್ಯಾಂಗ್ನಿಂದ ಮೋಸ ಹೋದ ವ್ಯಕ್ತಿಯೊಬ್ಬರು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಜಾಡು ಹಿಡಿದು ಬೆಂಗಳೂರು ಪೊಲೀಸರು ಹೈದರಾಬಾದ್ಗೆ ಬಂದಿದ್ದರು.
ಈ ಗ್ಯಾಂಗ್ ನಡೆಸುತ್ತಿದ್ದ ಹೈದರಾಬಾದ್ ಮೂಲದ ಪ್ರಮುಖ ಆರೋಪಿ ಸತ್ಯನಾರಾಯಣರಾಜು, ಮಹಾರಾಷ್ಟ್ರ ಮೂಲದ ಸಿದ್ಧಾರ್ಥ, ನಾಗುರಾವ್ ಕಿರಣ್ ಮತ್ತು ಭಾನುದಾಸ್ ಸೇರಿ ನಾಲ್ವರನ್ನು ಜುಬಿಲಿ ಹಿಲ್ಸ್ ಸಮೀಪ ಬುಧವಾರ ಪತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಕಲಿ ಪೊಲೀಸ್ ಐಡಿ ಬಳಕೆ: ರೈಸ್ ಪುಲ್ಲಿಂಗ್ ಹೆಸರಲ್ಲಿ ಮೋಸ ಮಾಡುವುದಲ್ಲೇ ನಕಲಿ ಪೊಲೀಸ್ ಐಡಿಗಳನ್ನು ಈ ಖದೀಮರು ಬಳಕೆ ಮಾಡುತ್ತಿದ್ದರು. ಪ್ರಮುಖ ಆರೋಪಿ ಸತ್ಯನಾರಾಯಣರಾಜು ಸುಧಾಕರ್ ರೆಡ್ಡಿ ಎಂಬ ಹೆಸರಿನಲ್ಲಿ ಪೊಲೀಸ್ ಅಧಿಕಾರಿ ಎಂದು ನಕಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದು, ಉಳಿದವರು ಕಾನ್ಸ್ಟೇಬಲ್ ವೇಷ ಧರಿಸಿ ಮೋಸ ಮಾಡುತ್ತಿದ್ದರು ಎಂಬ ವಿಷಯ ತನಿಖೆ ವೇಳೆ ಬಯಲಿಯಾಗಿದೆ.
ಇದನ್ನೂ ಓದಿ: ರೈಸ್ಪುಲ್ಲಿಂಗ್ ದಂಧೆ: ಕೈಗೆ ಚೆಂಬು ಕೊಟ್ಟು ವಂಚಿಸಿದ್ದವನ ಮಗ ಕಿಡ್ನಾಪ್.. ನಾಲ್ವರು ಅರೆಸ್ಟ್
ಅಲ್ಲದೇ, ಹೈದರಾಬಾದ್ ರಹಮತ್‌ನಗರದ 1996ರ ಬ್ಯಾಚ್ ಸರ್ಕಲ್ ಇನ್ಸ್ಪೆಕ್ಟರ್ ಎಂಬ ವಿಳಾಸವುಳ್ಳ ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಸಿದ್ಧಾರ್ಥ, ನಾಗುರಾವ್ ಕಿರಣ್ ಮತ್ತು ಭಾನುದಾಸ್ ಸೇರಿ ಎಲ್ಲರೂ ಸತ್ಯನಾರಾಯಣರಾಜು ಆದೇಶದಂತೆ ಕೆಲಸ ಮಾಡುತ್ತಿದ್ದೇವೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಹೇಗೆ ಮೋಸ ಮಾಡಲಾಗುತ್ತಿತ್ತು?: ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಸತ್ಯನಾರಾಯಣರಾಜು ಮತ್ತು ಆತನ ಗ್ಯಾಂಗ್ ರೈಸ್ ಪುಲ್ಲಿಂಗ್ ಮಷಿನ್ ಮಾರಾಟ ಮಾಡುವುದಾಗಿ ಹೇಳಿ ಬೆಂಗಳೂರಿನಲ್ಲಿ ಹಲವರಿಗೆ ಆಮಿಷವೊಡ್ಡಿ ರಹಸ್ಯ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿತ್ತು.
ಇದೇ ವೇಳೆ, ಸತ್ಯನಾರಾಯಣರಾಜು ಪೊಲೀಸ್ ವೇಷ ಧರಿಸಿ ಸ್ಥಳಕ್ಕೆ ಬಂದು ತನ್ನದೇ ತಂಡದ ಮೇಲೆ ಹಲ್ಲೆ ನಡೆಸುತ್ತಿದ್ದ. ನಂತರ ಈ ಗ್ಯಾಂಗ್ ತಮ್ಮ ಜೊತೆಗೆ ಬಂದವರನ್ನು ಬಂಧಿಸಿ ಅಪಾರ ಪ್ರಮಾಣದ ಹಣಕ್ಕೆ ಬೇಡಿಕೆ ಇಡುತ್ತಿತ್ತು. ಹಣ ಕೊಡದಿದ್ದರೆ ಬಟ್ಟೆ ಕಳಚಿ ವಿಡಿಯೋ ಚಿತ್ರೀಕರಿಸಿ ಸಂಬಂಧಿಕರು, ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಸುತ್ತಿತ್ತು ಎಂದು ಬೆಂಗಳೂರು ಪೊಲೀಸರು 'ಈಟಿವಿ ಭಾರತ್'ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೈಸ್ ಪುಲ್ಲಿಂಗ್ ದಂಧೆಗೂ ಬಂತು ಹೈಟೆಕ್ ಸ್ಪರ್ಶ: ಐವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ
ಈ ಗ್ಯಾಂಗ್ ಒಂದು ವರ್ಷದಿಂದ ಬೆಂಗಳೂರಿನಲ್ಲಿ ವಂಚನೆಯಲ್ಲಿ ತೊಡಗಿತ್ತು. ಹೈದರಾಬಾದ್‌ನಲ್ಲೂ ಮೂರ್ನಾಲ್ಕು ಜನರನ್ನು ವಂಚಿಸಿದೆ. ಹೈದರಾಬಾದ್‌ನಲ್ಲೂ ಜನರನ್ನು ಲಾಡ್ಜ್‌ಗಳಿಗೆ ಕರೆದುಕೊಂಡು ಬಂದು ಬೀಗ ಹಾಕಿ ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಬ್ಬನಿಗಾಗಿ ಪೊಲೀಸರ ಶೋಧ: ಈ ಗ್ಯಾಂಗ್‌ನಲ್ಲಿ ಸ್ವಾಮಿ ಎಂಬ ಮತ್ತೊಬ್ಬ ವ್ಯಕ್ತಿ ಇದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ತೆಲಂಗಾಣದಲ್ಲಿ ಕಳೆದ ಚುನಾವಣೆಯಲ್ಲಿ ಈ ವ್ಯಕ್ತಿ ಸ್ಪರ್ಧಿಸಿದ್ದ ಎಂಬುವುದಾಗಿಯೂ ಗ್ಯಾಂಗ್ನ ಸದಸ್ಯರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಆತನಿಗಾಗಿ ಬೆಂಗಳೂರು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಧಾರವಾಡ: ನಕಲಿ ನೋಟರಿ ಜಾಲ ಪತ್ತೆ, ವಕೀಲರಿಂದಲೇ ಅಂಗಡಿ ಮೇಲೆ ದಾಳಿ