ಜಲಂಗಾವ್(ಮಹಾರಾಷ್ಟ್ರ): ಕಡಲೆಕಾಯಿ, ತೆಂಗಿನಕಾಯಿ, ತರಕಾರಿ, ಹಣ್ಣುಗಳು, ಚಾಕೋಲೇಟ್ ಹೀಗೆ ವಿವಿಧ ಪದಾರ್ಥಗಳಿಂದ ಗಣೇಶನ ಮೂರ್ತಿಗಳನ್ನು ತಯಾರಿಸಿರುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಾ. ಆದರೆ, ಸಾಬಕ್ಕಿ ಗಣೇಶನನ್ನು ಕಂಡಿದ್ದೀರೇ? ಮಹಾರಾಷ್ಟ್ರದ ಜಲಂಗಾವ್ನಲ್ಲಿ ಬಂಗಾಳಿ ಶಿಲ್ಪಿಯೊಬ್ಬರು ಕೇಸರಿ-ಬಿಳಿ-ಹಸಿರು ಬಣ್ಣದಲ್ಲಿ ಸಾಬಕ್ಕಿ ಗಣೇಶನನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ರಾಮಕೃಷ್ಣ ಸಚ್ಚುಗೋಪಾಲ್ ಪಾಲ್ ಎಂಬವರೇ ಈ ಮೂರ್ತಿ ನಿರ್ಮಿಸಿದ ಶಿಲ್ಪಿ. ಇವರು ಕಳೆದ 15 ವರ್ಷಗಳಿಂದ ಜಲಗಾಂವ್‌ನಲ್ಲಿ ಗಣೇಶನ ವಿಗ್ರಹ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇವರೊಂದಿಗೆ 10-12 ಮಂದಿ ಕೆಲಸಗಾರರೂ ಇದ್ದಾರೆ. ಈ ಹಿಂದೆ ಅವರು ಚಹಾ ಎಲೆ, ಕಡಲೆಕಾಯಿ, ಗೋಡಂಬಿ, ಬಾದಾಮಿ, ಬಿಸ್ಕತ್ತುಗಳು, ತೆಂಗಿನಕಾಯಿ ಮತ್ತು ವಿವಿಧ ಹಣ್ಣುಗಳಿಂದ ಗಣೇಶನ ವಿಗ್ರಹಗಳನ್ನು ತಯಾರಿಸಿದ್ದಾರೆ. ಈ ಬಾರಿ ಸಾಬಕ್ಕಿಯನ್ನು ಬಳಸಿ 5 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ.
ಈ ಗಣಪನಿಗೆ ಬಳಸಿದ ಸಾಬಕ್ಕಿ ಎಷ್ಟು ಪ್ರಮಾಣದ್ದು ಗೊತ್ತಾ?
ಕಳೆದ ವರ್ಷ ಮಧ್ಯಪ್ರದೇಶದ ಖೇಟಿಯಾದ ಗಣೇಶ ಮಂಡಳಿಯೊಂದು ಅವರಿಂದ ತೆಂಗಿನಕಾಯಿ ಗಣೇಶ ಮೂರ್ತಿಯನ್ನು ಖರೀದಿಸಿತ್ತು. ಈ ವರ್ಷ, ಅದೇ ಗಣೇಶ ಮಂಡಳಿಯು ಸ್ವಲ್ಪ ವಿಭಿನ್ನ ಪರಿಕಲ್ಪನೆಯ ಮೇಲೆ ಗಣೇಶ ಮೂರ್ತಿಯನ್ನು ಮಾಡಲು ವಿನಂತಿಸಿದ್ದರು. ಅದರಂತೆ, ರಾಮಕೃಷ್ಣ ಪಾಲ್ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸಿ, ಅದರ ಮೇಲೆ ಸಾಬಕ್ಕಿಯನ್ನು ಅಂಟಿಸಿ, ರಾಷ್ಟ್ರ ಧ್ವಜದ ತ್ರಿವರ್ಣಗಳಾದ ಕೇಸರಿ - ಬಿಳಿ-ಹಸಿರು ಬಣ್ಣವನ್ನು ಬಳಿದಿದ್ದಾರೆ. ಇದಕ್ಕಾಗಿ ಅವರು 50 ಕೆಜಿ ಸಾಬಕ್ಕಿಯನ್ನು ಬಳಸಿದ್ದು, 20 ದಿನಗಳನ್ನು ತೆಗೆದುಕೊಂಡಿದ್ದಾರೆ.
ಸಾಬಕ್ಕಿ ಗಣಪನ ಬೆಲೆ ಎಷ್ಟು?
"ಮಧ್ಯಪ್ರದೇಶದ ಗಣೇಶ ಮಂಡಳಿಯು 15 ಸಾವಿರ ರೂ. ಹಣ ನೀಡಿ ಇದನ್ನು ಖರೀದಿಸಿದ್ದಾರೆ. ಕೋವಿಡ್ನಿಂದಾಗಿ ಕಳೆದೆರಡು ವರ್ಷಗಳಿಂದ ನಮ್ಮ ವ್ಯಾಪಾರಕ್ಕೆ ಪೆಟ್ಟು ನೀಡಿದೆ. ನಾವು ಹಸಿವಿನಿಂದ ಬಳಲುತ್ತಿದ್ದೇವೆ. ಈ ವರ್ಷ ನಾವು ಕೇವಲ 30 ಮೂರ್ತಿಗಳನ್ನು ತಯಾರಿಸಿದ್ದು, ಇವುಗಳಲ್ಲಿ 15 ಮೂರ್ತಿಗಳು ಮಾತ್ರ ಬುಕ್ ಆಗಿದೆ" ಎಂದು ಈಟಿವಿ ಭಾರತದೊಂದಿಗೆ ರಾಮಕೃಷ್ಣ ಪಾಲ್ ತಮ್ಮ ಅಳಲು ತೋಡಿಕೊಂಡಿದ್ದಾರೆ.