ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಧಾನಸಭೆ ಚುನಾವಣೆ ಬಳಿಕ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (Central Bureau of Investigation) ಮತ್ತೊಂದು ಪ್ರಕರಣವನ್ನು ದಾಖಲಿಸಿದೆ. ಸಿಬಿಐ ಪ್ರಕಾರ, ಹೊಸ ಪ್ರಕರಣವು ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ವಿರುದ್ಧ ನಡೆದ ಅತ್ಯಾಚಾರ ಯತ್ನ( Attempt to rape case)ಕ್ಕೆ ಸಂಬಂಧಿಸಿದೆ.
ಮೇ ತಿಂಗಳಲ್ಲಿ ನಬಗ್ರಾಮ್ ಪ್ರದೇಶ (Nabagram area)ದಲ್ಲಿ ಅತ್ಯಾಚಾರ ಯತ್ನದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. ಈ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಮುರ್ಷಿದಾಬಾದ್ ಜಿಲ್ಲೆಯ ಕಂಡಿಯಿಂದ ಹಿಂತಿರುಗುತ್ತಿದ್ದ ದೂರುದಾರ ಮಹಿಳೆ ಮತ್ತು ಆಕೆಯ ಸ್ನೇಹಿತೆಯನ್ನು ಕೆಲವು ಪುರುಷರು ಅಡ್ಡಗಟ್ಟಿದ್ದಾರೆ. ಒಬ್ಬ ವ್ಯಕ್ತಿ ದೂರುದಾರರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರೆ, ಇತರರು ಆಕೆಯ ಸ್ನೇಹಿತೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆಗಸ್ಟ್ 25ರಂದು ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆದ ಎಂಟು ಹಂತಗಳ ವಿಧಾನಸಭಾ ಚುನಾವಣೆಯ ನಂತರ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಆಪಾದಿತ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗಸ್ಟ್ 19ರಂದು ಹೈಕೋರ್ಟ್ ಆದೇಶಿಸಿತ್ತು. ಸಂಸ್ಥೆಯು ಇದುವರೆಗೆ 45 ಪ್ರಕರಣಗಳನ್ನು ದಾಖಲಿಸಿದೆ.
ಓದಿ: Cryptocurrency: ಕ್ರಿಪ್ಟೋ ನಿಲ್ಲಿಸುವುದು ಅಸಾಧ್ಯ; ನಿಯಂತ್ರಣ ಅಗತ್ಯ- ಸಂಸದೀಯ ಸಮಿತಿ ಸಭೆ