ಹೈದರಾಬಾದ್: ಪಶ್ಚಿಮ ಬಂಗಾಳದ 36 ಕ್ಷೇತ್ರಗಳಿಗೆ ಸೋಮವಾರ 7ನೇ ಹಂತದ ಮತದಾನ ನಡೆಯಲಿದ್ದು, ಒಟ್ಟು 284 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಮುಖವಾಗಿ ಇದರಲ್ಲಿ ಶೇ. 26ರಷ್ಟು ಚುನಾವಣಾ ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ಗಳ ಹಿನ್ನೆಲೆ ಹೊಂದಿದ್ದಾರೆ.
ಕಣದಲ್ಲಿರುವ ಮಹಿಳಾ ಅಭ್ಯರ್ಥಿಗಳು
ಪಶ್ಚಿಮ ಬಂಗಾಳದ 284 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ 222 ಕ್ಷೇತ್ರಗಳಿಗೆ ಮತದಾನವಾಗಿದ್ದು, ನಾಳೆ 7ನೇ ಹಂತಕ್ಕೆ ವೋಟಿಂಗ್ ನಡೆಯಲಿದೆ. ಒಟ್ಟು 86,78,221 ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಈಗಾಗಲೇ ಚುನಾವಣಾ ಪ್ರಚಾರ ಸಭೆಗಳಿಗೆ ಬ್ರೇಕ್ ಹಾಕಲಾಗಿದೆ. ಇದರ ಮಧ್ಯೆ ಕೂಡ ನಾಳೆ ಮತದಾನ ನಡೆಯುತ್ತಿದ್ದು, ಮತದಾರ ಪ್ರಭು ಯಾರ ಪರವಾಗಿ ವಾಲುತ್ತಾನೆಂಬ ಕುತೂಹಲವಿದೆ.
ಶೇ. 26ರಷ್ಟು ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣ
5 ಜಿಲ್ಲೆಯ 36 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 284 ಅಭ್ಯರ್ಥಿಗಳ ಪೈಕಿ ಶೇ. 26ರಷ್ಟು ಮುಖಂಡರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಇದರಲ್ಲಿ ಸಿಪಿಐ(ಎಂ) ಅಗ್ರಸ್ಥಾನದಲ್ಲಿದೆ. ಈ ಪಕ್ಷದ 13 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.
ಕ್ರಿಮಿನಲ್ ಪ್ರಕರಣ ಘೋಷಿಸಿಕೊಂಡಿರುವ 36 ಅಭ್ಯರ್ಥಿಗಳ ಕ್ಷೇತ್ರಗಳನ್ನ ರೆಡ್ ಅಲರ್ಟ್ ಕ್ಷೇತ್ರಗಳಾಗಿ ಘೋಷಿಸಲಾಗಿದೆ. ಹೀಗಾಗಿ 653 ಭದ್ರತಾ ಸಿಬ್ಬಂದಿ ಪಡೆ ನಿಯೋಜನೆ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ.
ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಪ್ರಮುಖವಾಗಿ ಮುರ್ಷಿದಾಬಾದ್, ಮಾಲ್ಡಾ ಮತ್ತು ದಕ್ಷಿಣ ದಿನಾಜ್ಪುರ್ ಸೇರಿದಂತೆ ಕೆಲವೊಂದು ಜಿಲ್ಲೆಗಳು ಬಾಂಗ್ಲಾ ಗಡಿ ಹಂಚಿಕೊಂಡಿರುವ ಕಾರಣ ಇಲ್ಲಿ ಸೂಕ್ಷ್ಮ ಮತಗಟ್ಟೆಗಳೆಂದು ಘೋಷಣೆ ಮಾಡಲಾಗಿದೆ. ಹೀಗಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಏಪ್ರಿಲ್ 29ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.
7ನೇ ಹಂತದ ಚುನಾವಣೆಯಲ್ಲಿ ಕೋಟ್ಯಧಿಪತಿಗಳು
ಪಶ್ಚಿಮ ಬಂಗಾಳದಲ್ಲಿ ಈ ಸಲ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಅಧಿಕಾರ ಪಡೆದುಕೊಳ್ಳುವ ಉದ್ದೇಶದಿಂದ ಕಣಕ್ಕಿಳಿದಿವೆ. ಈಗಾಗಲೇ ತಮಿಳುನಾಡು, ಕೇರಳ, ಪುದುಚೇರಿ, ಅಸ್ಸೋಂ ವಿಧಾನಸಭೆ ಕ್ಷೇತ್ರ ಹಾಗೂ ಕರ್ನಾಟಕದ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆಗೂ ಉಪಚುನಾವಣೆ ನಡೆದಿದೆ.