ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೇಲಿಂದ ಮೇಲೆ ವಾಗ್ದಾಳಿ ನಡೆಸುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಲ್ಕು ದಿನಗಳ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
ಪ್ರಧಾನಿ ಜೊತೆಗಿನ ಸಭೆಯಲ್ಲಿ ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್ಟಿ ಪಾಲು ಸೇರಿದಂತೆ ಅನೇಕ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಅಕ್ರಮ ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಟಿಎಂಸಿ ಮಾಜಿ ಸಚಿವ ಪಾರ್ಥ ಚಟರ್ಜಿಯನ್ನು ಬಂಧಿಸಿದ್ದು, ಇದಾದ ಕೆಲ ದಿನಗಳ ನಂತರ ಮಮತಾ ಬ್ಯಾನರ್ಜಿ ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ. ಈ ಬೆಳವಣಿಗೆ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ: ಬಾಯ್ಫ್ರೆಂಡ್ಗೆ ಏಡ್ಸ್ ಇದೆ ಎಂದು ತನ್ನ ದೇಹದೊಳಗೂ HIV ಸೇರಿಸಿಕೊಂಡ ಗೆಳತಿ!
ಇಂದು ಸಂಜೆ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮಮತಾ ಬ್ಯಾನರ್ಜಿ ಭೇಟಿ ಮಾಡಲಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ದೆಹಲಿಯಲ್ಲಿ ಆಗಸ್ಟ್ 7ರಂದು ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ ನಡೆಯಲಿದ್ದು, ಅದರಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳುವರು.
ವಿವಿಧ ಪಕ್ಷಗಳ ನಾಯಕರ ಭೇಟಿ ಸಾಧ್ಯತೆ: 2024ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮಮತಾ, ಕಾಂಗ್ರೆಸ್ಸೇತರ ನಾಯಕರ ಭೇಟಿ ಮಾಡುವ ಸಾಧ್ಯತೆಯೂ ಇದೆ. ಪ್ರಮುಖವಾಗಿ ಇಡಿ ವಿಚಾರಣೆ ಎದುರಿಸಿರುವ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವರೆಂದು ಹೇಳಲಾಗ್ತಿದೆ.