ನವದೆಹಲಿ: ಮೇ 13ರಿಂದ 15ರವರೆಗೆ ಕಾಂಗ್ರೆಸ್ ಪಕ್ಷ ರಾಜಸ್ಥಾನದಲ್ಲಿ ಚಿಂತನ ಶಿಬಿರ ಆಯೋಜನೆ ಮಾಡಿದೆ. ಇದಕ್ಕಾಗಿ ಮಹತ್ವದ ಸಭೆ ನಡೆಸಿದ ಅಧ್ಯಕ್ಷೆ ಸೋನಿಯಾ ಹಿರಿಯ ಮುಖಂಡರೊಂದಿಗೆ ವಿವಿಧ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಚಿಂತನ ಶಿಬಿರ ಅರ್ಥಪೂರ್ಣವಾಗಿ ನಡೆಸುವ ಉದ್ದೇಶದಿಂದ ಈ ಸಭೆ ನಡೆಸಲಾಗಿದೆ ಎಂದು ಎಐಸಿಸಿ ಹಿರಿಯ ಪದಾಧಿಕಾರಿ ತಿಳಿಸಿದ್ದಾರೆ.
ಚಿಂತನ ಶಿಬಿರದ ರೂಪರೇಷಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಸಂಜೆ ಸಿಡಬ್ಲೂಸಿ ಸಭೆ ನಡೆಸಲಿದ್ದಾರೆ. ಇದಕ್ಕೂ ಮುಂಚಿತವಾಗಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಮಲ್ಲಿಕಾರ್ಜುನ ಖರ್ಗೆ, ದೇಶದ ಆರ್ಥಿಕತೆ ಬಗ್ಗೆ ಚಿದಂಬರಂ, ಪಕ್ಷದ ಸಂಘಟನೆಗಾಗಿ ಮುಕುಲ್ ವಾಸ್ನಿಕ್, ಸಮಾಜ ಕಲ್ಯಾಣ ಸಲ್ಮಾನ್ ಖುರ್ಷಿದ್, ಕೃಷಿ ಸಮಸ್ಯೆ ಭೂಪಿಂದರ್ ಹೂಡಾ ಹಾಗೂ ಯುವಜನತೆ ಮತ್ತು ಸಬಲೀಕರಣಕ್ಕಾಗಿ ಅಮರಿಂದರ್ ರಾಜ್ ವಾರಿಂಗ್ ಜೊತೆ ಸಭೆ ನಡೆಸಿದರು.
ಇದನ್ನೂ ಓದಿ: ಹನುಮಾನ್ ಚಾಲೀಸಾ ವಿವಾದ : ರಾಣಾ ದಂಪತಿಗೆ ಮುಂಬೈ ಸೆಷನ್ ಕೋರ್ಟ್ನಿಂದ ನೋಟಿಸ್
2024ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜಸ್ಥಾನದಲ್ಲಿ ಚಿಂತನ ಶಿಬಿರ ಆಯೋಜನೆಗೊಂಡಿದ್ದು, ಇದರಲ್ಲಿ ಭಾಗಿಯಾಗಲಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದರಲ್ಲಿ ದೇಶದ 400ಕ್ಕೂ ಅಧಿಕ ನಾಯಕರು ಭಾಗಿಯಾಗಲಿದ್ದು, ಸಿದ್ಧತೆ ಬಗ್ಗೆ ಅಂತಿಮ ರೂಪರೇಷಕ್ಕಾಗಿ ಇಂದು ಸಂಜೆ 4:30ಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.
ಪ್ರಮುಖವಾಗಿ ಕೇಂದ್ರ ಸರ್ಕಾರದ ವೈಫಲ್ಯ ಸೇರಿದಂತೆ ಪ್ರಮುಖ ಜ್ವಲಂತ ವಿಷಯಗಳ ಬಗ್ಗೆ ಈ ಚಿಂತನ ಶಿಬಿರದಲ್ಲಿ ಮೂರು ದಿನಗಳ ಕಾಲ ಚಿಂತನ - ಮಂಥನ ನಡೆಯಲಿದೆ. ಪ್ರಮುಖವಾಗಿ ಗೋಧಿ, ಅಕ್ಕಿಗೆ ಕನಿಷ್ಠ ಬೆಂಬಲ ಬೆಲೆಯನ್ನ ಕೇಂದ್ರ ಕಾನೂನುಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆ ಸಹ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
2024ರ ಲೋಕಸಭೆ ಚುನಾವಣೆಗೂ ಮುಂಚಿತವಾಗಿ ಕರ್ನಾಟಕ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲ್ಲಿ ಯಾವ ರೀತಿಯಾಗಿ ತಯಾರಿ ನಡೆಸಬೇಕೆಂಬ ಬಗ್ಗೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ಆಯೋಜನೆಗೊಂಡಿರುವ ಸಭೆಯಲ್ಲಿ ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ರಾಜೀವ್ ಗೌಡ, ಶ್ರೀನಿವಾಸ್ ಬಿವಿ, ಕೃಷ್ಣಭೈರೇಗೌಡ ಅವರು ಭಾಗಿಯಾಗುತ್ತಿದ್ದಾರೆ.