ಥಾಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮಲ್ಟಿಪ್ಲೆಕ್ಸ್‌ನಲ್ಲಿ ಸೋಮವಾರ ಸಂಜೆ ಮರಾಠಿ ಸಿನಿಮಾವಾದ 'ಹರ್ ಹರ್ ಮಹಾದೇವ್' ಪ್ರದರ್ಶನ ಬಲವಂತವಾಗಿ ನಿಲ್ಲಿಸಲಾಗಿದೆ. ಈ ಪ್ರದರ್ಶನವನ್ನು ನಿಲ್ಲಿಸಿದ ನಂತರ ಸಿನಿಮಾ ನೋಡಲು ಬಂದವರಿಗೆ ಥಳಿಸಿದ ಆರೋಪದಲ್ಲಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ಹರ್ ಹರ್ ಮಹಾದೇವ್’ ಮರಾಠಿ ಸಿನಿಮಾದ ಪ್ರದರ್ಶನವನ್ನು ಬಲವಂತವಾಗಿ ನಿಲ್ಲಿಸಿದ್ದನ್ನು ಸಮರ್ಥಿಸಿಕೊಂಡಿರುವ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಥಾಣೆ ಜಿಲ್ಲೆಯ ಮುಂಬ್ರಾ ಕ್ಷೇತ್ರದ ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾದ್, ‘ವಾಸ್ತವದಲ್ಲಿ ಎಂದೂ ನಡೆಯದ ಐತಿಹಾಸಿಕ ಘಟನೆಗಳನ್ನು ಸಿನಿಮಾ ತೋರಿಸುತ್ತಿದೆ. ಈ ರೀತಿ ಸಿನಿಮಾವನ್ನು ತೋರಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಮಹಾರಾಷ್ಟ್ರ ಪೊಲೀಸರು ಎನ್‌ಸಿಪಿ ನಾಯಕ ಮತ್ತು ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಥಾಣೆ ಜಿಲ್ಲೆಯ ವರ್ತಕ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) 141,143, 146, 149, 323, 504 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾಜಿ ಸಚಿವ ಜಿತೇಂದ್ರ ಅವ್ಹಾದ್ ಮತ್ತು ಸುಮಾರು 100 ಎನ್‌ಸಿಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಬಾಲಿವುಡ್ಗೆ ಎಂಟ್ರಿ ಕೊಡಲು ಸಿದ್ಧರಾದ ಸ್ಟಾರ್ ಕಿಡ್ ಅರ್ಹಾನ್ ಖಾನ್
ಹರ್ ಹರ್ ಮಹಾದೇವ್ ಸಿನಿಮಾಗೆ ಸಂಬಂಧಿಸಿದಂತೆ ಎನ್‌ಸಿಪಿ ಮತ್ತು ಎಂಎನ್‌ಎಸ್ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಇದೀಗ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಥಾಣೆಯಲ್ಲಿ ಹರ್ ಹರ್ ಮಹಾದೇವ್ ಚಿತ್ರದ ಉಚಿತ ಪ್ರದರ್ಶನ ಆಯೋಜಿಸಿದೆ.