ಮುಂಬೈ: ಕೋವಿಡ್ -19 ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ಕಾರಣ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತೀವ್ರ ಆರ್ಥಿಕ ನಷ್ಟ ಅನುಭವಿಸಿತ್ತು. ಇದನ್ನು ಸರಿದೂಗಿಸಲು ಜುಲೈ 2022ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸದ ವೇಳೆ ಎರಡು ಹೆಚ್ಚುವರಿ ಟಿ- 20 ಪಂದ್ಯಗಳನ್ನು ಆಡಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಆ ಸುದ್ದಿ ನಿಜ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೃಢಪಡಿಸಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, "ಐದನೇ ಟೆಸ್ಟ್ನಲ್ಲಿನ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಲು ಇಸಿಬಿ ಒಪ್ಪಿಕೊಂಡರೆ ಎರಡು ಹೆಚ್ಚುವರಿ ಟಿ- 20 ಪಂದ್ಯಗಳನ್ನು ಆಡಲು ಸಿದ್ಧ" ಎಂದು ಹೇಳಿದ್ದಾರೆ.
"ಜುಲೈ 2022ರಲ್ಲಿ ಇಂಗ್ಲೆಂಡ್‌ಗೆ ಭೇಟಿ ನೀಡಿದಾಗ ಎರಡು ಹೆಚ್ಚುವರಿ ಟಿ - 20 ಪಂದ್ಯಗಳನ್ನು ಆಡಲು ನಾವು ಸಿದ್ಧ (ವೈಟ್ ಬಾಲ್ ಆಟ ಮಾತ್ರ). ಮೂರು ಟಿ-20 ಬದಲಾಗಿ ನಾವು 5 ಪಂದ್ಯಗಳನ್ನು ಆಡುತ್ತೇವೆ. ಇಲ್ಲವಾದಲ್ಲಿ ವನ್ ಆಫ್ ಟೆಸ್ಟ್ ಆಡುತ್ತೇವೆ. ಆಯ್ಕೆ ಅವರಿಗೆ ಬಿಟ್ಟಿದ್ದು" ಎಂದು ಶಾ ಹೇಳಿದ್ದಾರೆ.
"ಇಸಿಬಿ ಈಗಾಗಲೇ 40 ಮಿಲಿಯನ್ ಪೌಂಡ್ಗಳ ಸಂಭಾವ್ಯ ಕೊರತೆ ನಿವಾರಿಸಲು ಸಹಾಯ ಮಾಡುವಂತೆ ಕೋರಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ಆಯ್ಕೆಗಳನ್ನು ನೀಡಿದೆ" ಎಂದು ಶಾ ಹೇಳಿರುವುದಾಗಿ ಯುಕೆ ಪತ್ರಿಕೆ ವರದಿ ಮಾಡಿದೆ.