ಲಖನೌ(ಉತ್ತರ ಪ್ರದೇಶ): ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಇಂದಿನಿಂದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಯೂ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಗಳಲ್ಲೂ ಕೂಡಾ ಸಾಕಷ್ಟು ಬದಲಾವಣೆಯಾಗುತ್ತಿವೆ. ಬಿಜೆಪಿ ಮೈತ್ರಿಕೂಟದ ಪಕ್ಷವಾದ ಅಪ್ನಾ ದಳಕ್ಕೆ ಸೇರಿದ ಮತ್ತಿಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ.
ಚೌಧರಿ ಅಮರ್ ಸಿಂಗ್ ಮತ್ತು ಆರ್.ಕೆ. ವರ್ಮಾ ರಾಜೀನಾಮೆ ನೀಡಿದ್ದು, ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಮೈತ್ರಿ ತೊರೆದ ಇಬ್ಬರೂ ಶಾಸಕರು ಯೋಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವು ಹಿಂದುಳಿದವರ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ಚೌಧರಿ ಅಮರ್ ಸಿಂಗ್ ಸಮಾಜವಾದಿ ಪಕ್ಷದ ಟಿಕೆಟ್ ಪಡೆದು ಸಿದ್ಧಾರ್ಥನಗರದ ಶೋಹರತ್‌ಗಢ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಪ್ರತಾಪಗಢದ ಜಿಲ್ಲೆಯ ವಿಶ್ವನಾಥ್ ಗಂಜ್ ಕ್ಷೇತ್ರವನ್ನು ಪ್ರತಿನಿಧಿಸುವ ಮತ್ತೊಬ್ಬ ಅಪ್ನಾ ದಳದ ಶಾಸಕ ಆರ್.ಕೆ. ವರ್ಮಾ ಕೂಡಾ ಪಕ್ಷವನ್ನು ತೊರೆದು, ಸಮಾಜವಾದಿ ಪಕ್ಷವನ್ನು ಸೇರುವುದಾಗಿ ಘೋಷಿಸಿದ್ದಾರೆ.
10 ಮಂದಿ ಬಿಜೆಪಿ ಶಾಸಕರು ಗುಡ್ಬೈ: ಮಂಗಳವಾರದಿಂದ 10 ಬಿಜೆಪಿ ಶಾಸಕರು ಬಿಜೆಪಿ ತೊರೆದಿದ್ದಾರೆ. ಮೊದಲಿಗೆ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ನೀಡಿದ್ದು, ಅದಾದ ನಂತರ ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ಆಪ್ತರಾದ ಭಗವತಿ ಸಾಗರ್, ರೋಷನ್ ಲಾಲ್ ವರ್ಮಾ ಮತ್ತು ಬ್ರಿಜೇಶ್ ಪ್ರಜಾಪತಿ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಬುಧವಾರ ಮತ್ತೊಬ್ಬ ಸಚಿವ ದಾರಾ ಸಿಂಗ್ ಚೌಹಾಣ್ ಮತ್ತು ಶಾಸಕ ಅವತಾರ್ ಸಿಂಗ್ ಭದಾನ ರಾಜೀನಾಮೆ ನೀಡಿದ್ದು, ಭದಾನ ಅವರು ಸಮಾಜವಾದಿ ಮಿತ್ರಪಕ್ಷವಾದ ಆರ್‌ಎಲ್‌ಡಿಗೆ ಸೇರ್ಪಡೆಯಾಗಿದ್ದಾರೆ.
ಗುರುವಾರ ಸಚಿವ ಧರಂ ಸಿಂಗ್ ಸೈನಿ ಮತ್ತು ಶಾಸಕರಾದ ವಿನಯ್ ಶಾಕ್ಯಾ, ಮುಖೇಶ್ ವರ್ಮಾ ಮತ್ತು ಬಾಲಾ ಅವಸ್ತಿ ಬಿಜೆಪಿ ತೊರೆದಿದ್ದು, ಯೋಗಿ ಸರ್ಕಾರ ಹಿಂದುಳಿದವರ ಪರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂವರೂ ಶಾಸಕರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ.
ರಾಜೀನಾಮೆ ನಂತರ..
ರಾಜೀನಾಮೆ ನೀಡಿದ ನಂತರ ಮಾತನಾಡಿದ ಚೌಧರಿ ಅಮರ್ ಸಿಂಗ್, ಈ ಯೋಗಿ ಸರ್ಕಾರ ಸುಳ್ಳುಗಾರ ಸರ್ಕಾರ, ಯಾವುದೇ ಅಭಿವೃದ್ಧಿ ಮಾಡಿಲ್ಲ. ನಾನು ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅವರ ಪಕ್ಷವನ್ನು ಸೇರಿಕೊಳ್ಳುತ್ತೇನೆ. ಶೀಘ್ರದಲ್ಲೇ ಇನ್ನೂ ಹಲವರು ತಮ್ಮ ನನ್ನೊಂದಿಗೆ ಸಮಾಜವಾದಿ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಶಾಸಕ ಮುಖೇಶ್ ವರ್ಮಾ, ಸ್ವಾಮಿ ಪ್ರಸಾದ್ ಮೌರ್ಯ ನಮ್ಮ ನಾಯಕರಾಗಿದ್ದು, ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಬೆಂಬಲಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ನಾಯಕರು ನಮ್ಮಜೊತೆ ಬರುತ್ತಾರೆ ಎಂಬ ನಂಬಿಕೆಯಿದೆ ಎಂದು ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ರಾಜೀನಾಮೆ ನೀಡಿದ್ದ ಉತ್ತರ ಪ್ರದೇಶ ಸಚಿವ ದಾರಾ ಸಿಂಗ್ ಚೌಹಾಣ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷದಲ್ಲಿದ್ದಾಗ ದಲಿತರು, ರೈತರು ಮತ್ತು ನಿರುದ್ಯೋಗಿಗಳ ಸಮಸ್ಯೆಗಳನ್ನು ಪದೇ ಪದೇ ಪ್ರಸ್ತಾಪಿಸಿದ್ದರೂ ಯೋಗಿ ಸರ್ಕಾರ ನಿರ್ಲಕ್ಷಿಸಿದೆ ಎಂದು ಚೌಹಾಣ್ ಆರೋಪಿಸಿದ್ದಾರೆ.
ಜಾತಿ ಲೆಕ್ಕಾಚಾರ..
ಸದ್ಯಕ್ಕೆ ಬಿಜೆಪಿ ತ್ಯಜಿಸಿದ ಬಹುತೇಕ ನಾಯಕರು ಸಮಾಜವಾದಿ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾತಿ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ ಮತ್ತು ಉತ್ತರ ಪ್ರದೇಶ ಬಿಜೆಪಿಯನ್ನು ಕಂಗಾಲಾಗಿಸಿದೆ.
ಪ್ರಸ್ತುತ ರಾಜೀನಾಮೆ ನೀಡಿದ ನಾಯಕರು ಒಬಿಸಿ ಅಥವಾ ಬ್ರಾಹ್ಮಣರಾಗಿದ್ದಾರೆ. ಒಬಿಸಿ ಸಮುದಾಯವನ್ನು ಉತ್ತರ ಪ್ರದೇಶದ ಅತಿದೊಡ್ಡ ವೋಟ್ ಬ್ಯಾಂಕ್ ಎಂದು ಪರಿಗಣಿಸಲಾಗಿದೆ. ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ ಶೇಕಡಾ 50ರಷ್ಟು ಮಂದಿ ಒಬಿಸಿ ಸಮುದಾಯವಿದೆ. ಹಿಂದುಳಿದ ವರ್ಗಗಳಲ್ಲಿ ಯಾದವ ಸಮುದಾಯ ಹೊರತುಪಡಿಸಿ ಶೇಕಡಾ 35ರಷ್ಟು ಮಂದಿಯಿದ್ದಾರೆ.
ಶೇಕಡಾ 4ರಿಂದ 6ರಷ್ಟು ಲೋಧ್ ಸಮುದಾಯದಿಂದ, ಶೇಕಡಾ 3ರಷ್ಟು ಕುಮ್ಹರ್ ಸಮುದಾಯದಿಂದ, ಶೇಕಡಾ 6ರಷ್ಟು ಮಂದಿ ಕುಶ್ವಾಹ, ಮೌರ್ಯ, ಶಾಕ್ಯ ಮತ್ತು ಸೈನಿ ಮುಂತಾದ ಸಮುದಾಯಗಳಿಗೆ ಸೇರ್ಪಡೆಯಾಗಿದ್ದಾರೆ.
ಉತ್ತರ ಪ್ರದೇಶದ ಪಶ್ಚಿಮದಲ್ಲಿರುವ ಫಾರೂಕಾಬಾದ್, ಬದೌನ್, ಹತ್ರಾಸ್, ಬುಲಂದ್‌ಶಹರ್, ಆಗ್ರಾ, ಇಟಾಹ್, ಇಟಾವಾ, ಕಾಸ್‌ಗಂಜ್, ಅಮ್ರೋಹಾ ಸೇರಿದಂತೆ ಸುಮಾರು 25 ಜಿಲ್ಲೆಗಳಲ್ಲಿ ಲೋಧ್ ಸಮುದಾಯದ ಮತಗಳು ಪ್ರಮುಖವಾಗಿವೆ. ಮತ್ತೊಂದೆಡೆ ಇಟಾವಾ, ಜಲೌನ್, ಝಾನ್ಸಿ, ಕನೌಜ್, ಕಾನ್ಪುರ್ ದೇಹತ್ ಇತರ 13 ಜಿಲ್ಲೆಗಳಲ್ಲಿ ಶಾಕ್ಯ, ಮೌರ್ಯ, ಕುಶ್ವಾಹಾ ಸಮುದಾಯ ಹೆಚ್ಚಿದ್ದಾರೆ.
ಇದನ್ನೂ ಓದಿ: UP polls-2022: 172 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳು ಫೈನಲ್.. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ