ದುಬೈ: ವಿಶ್ವದ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ತೆಲಂಗಾಣದ ಸಾಂಪ್ರದಾಯಿಕ ಹಬ್ಬವಾದ ಬತುಕಮ್ಮ ಹಬ್ಬದ ವೈಭವವನ್ನು ಪ್ರದರ್ಶಿಸಲಾಗಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬತುಕಮ್ಮ ಹಬ್ಬವನ್ನು ಮತ್ತಷ್ಟು ಜನಪ್ರಿಯಗೊಳಿಸಲಾಗಿದೆ.
ಭಾರತೀಯ ಕಾಲಮಾನ ರಾತ್ರಿ 9.40 ನಿಮಿಷಕ್ಕೆ ಮತ್ತು 10.40 ನಿಮಿಷಕ್ಕೆ ಸುಮಾರು ಮೂರು ನಿಮಿಷಗಳ ಕಾಲ ಬತುಕಮ್ಮ ಹಬ್ಬದ ವಿಡಿಯೋವನ್ನು ಬುರ್ಜ್ ಖಲೀಫಾ ಕಟ್ಟಡದ ಮೇಲೆ ಪ್ರದರ್ಶಿಸಲಾಗಿದ್ದು, ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ವಿಡಿಯೋದಲ್ಲಿ ತೆಲಂಗಾಣ ನಕ್ಷೆ, ಮುಖ್ಯಮಂತ್ರಿ ಕೆಸಿಆರ್ ಭಾವಚಿತ್ರ, ಜೈಹಿಂದ್, ಜೈ ತೆಲಂಗಾಣ, ಜೈ ಕೆಸಿಆರ್ ಎಂಬ ಘೋಷಣೆಗಳನ್ನೂ ಪ್ರದರ್ಶಿಸಲಾಗಿದೆ. ಇದೇ ವೇಳೆ ಅಲ್ಲಿ ಭಾಗವಹಿಸಿದ್ದ ತೆಲುಗು ಪ್ರವಾಸಿಗರು ಭಾವೋದ್ವೇಗದಿಂದ ಜೈ ತೆಲಂಗಾಣ, ಜೈ ಕೆಸಿಆರ್ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ಬುರ್ಜ್ ಖಲೀಫಾ ಮೇಲೆ ಬತುಕಮ್ಮ ಅನಾವರಣಗೊಳ್ಳುವ ವೇಳೆ ವಿಧಾನಪರಿಷತ್ ಸದಸ್ಯೆ ಹಾಗೂ ಸಿಎಂ ಕೆಸಿಆರ್ ಪುತ್ರಿಯಾದ ಕವಿತಾ ಹಾಜರಿದ್ದರು. ತೆಲಂಗಾಣದ ಜಾಗೃತಿ ಅಧ್ಯಕ್ಷರೂ ಆಗಿರುವ ಕವಿತಾ ಬುರ್ಜ್ ಖಲೀಫಾ ಮೇಲೆ ಬತುಕಮ್ಮ ಅನಾವರಣಗೊಂಡಿದ್ದನ್ನು ಸಂಪೂರ್ಣವಾಗಿ ಆಸ್ವಾದಿಸಿದರು. ಜೊತೆಗೆ ಅಲ್ಲಿನ ತೆಲಂಗಾಣ ಮಹಿಳೆಯರೊಂದಿಗೆ ಬತುಕಮ್ಮ ನೃತ್ಯ ಮಾಡಿ ಸಂತೋಷ ಪಟ್ಟರು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೂಕ್ಷ್ಮ ರಹಸ್ಯಗಳನ್ನು ರವಾನೆ ಮಾಡುತ್ತಿದ್ದ ಯೋಧನ ಬಂಧನ