ಕೋಲ್ಕತ್ತಾ, ಪಶ್ಚಿಮ ಬಂಗಾಳ: ಬಾಂಗ್ಲಾದೇಶದ ಗ್ರಾಮಸ್ಥರು ಮತ್ತು ದುಷ್ಕರ್ಮಿಗಳು ಪಶ್ಚಿಮ ಬಂಗಾಳದ ಭಾರತ ಮತ್ತು ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಯೋಧರ ಮೇಲೆ ದಾಳಿ ನಡೆಸಿದ್ದಾರೆ. 100ಕ್ಕೂ ಹೆಚ್ಚು ಜನರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯೋಧರ ತಲೆ ಹಾಗೂ ದೇಹದ ಮೇಲೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಇಬ್ಬರು ಯೋಧರಿಗೆ ಚಿಕಿತ್ಸೆ ನಡೆಯುತ್ತಿದೆ.
ಘಟನೆಯ ನಂತರ BSF ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶದ (BGB) ಅಧಿಕಾರಿಗಳನ್ನು ಸಂಪರ್ಕಿಸಿದೆ. ಬೆಂಗಾಲ್ ಫ್ರಾಂಟಿಯರ್‌ನ ಬರ್ಹಾಮ್‌ಪುರ ಸೆಕ್ಟರ್‌ನ ಗಡಿ ಪೋಸ್ಟ್ ನಿರ್ಮಲ್ಚಾರ್ 35 ಬೆಟಾಲಿಯನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದ ರೈತರು ದನಗಳನ್ನು ಮೇಯಿಸಲು ನಮ್ಮ ಹೊಲಗಳಿಗೆ ಬರುತ್ತಾರೆ ಎಂದು ಭಾರತೀಯ ರೈತರಿಂದ ಬಿಎಸ್‌ಎಫ್ ನಿರಂತರವಾಗಿ ದೂರುಗಳನ್ನು ಸ್ವೀಕರಿಸುತ್ತಿದೆ. ಅವರು ಉದ್ದೇಶ ಪೂರ್ವಕ ಕೃತ್ಯದಿಂದ ಬೆಳೆಗಳು ಹಾಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಗಡಿ ಬಳಿ ಪೋಸ್ಟ್ ಮಾಡಿ ಬಿಎಸ್ಎಫ್ ಯೋಧರನ್ನು ನಿಯೋಜಿಸಲಾಗಿತ್ತು.
ಶಸ್ತ್ರಾಸ್ತ್ರಗಳನ್ನು ದೋಚಿದ ದುಷ್ಕರ್ಮಿಗಳು: ಭಾನುವಾರ ಬಾರ್ಡರ್ ಔಟ್ ಪೋಸ್ಟ್ ನಿರ್ಮಲ್ಚಾರ್‌ನ ಬಿಎಸ್‌ಎಫ್ ಜವಾನರು ಗಡಿಯಲ್ಲಿ ಕರ್ತವ್ಯದಲ್ಲಿದ್ದರು. ಈ ಸಂದರ್ಭದಲ್ಲಿ ತಮ್ಮ ಜಾನುವಾರುಗಳೊಂದಿಗೆ ಭಾರತದ ಗಡಿ ಪ್ರವೇಶಿಸುತ್ತಿದ್ದ ಬಾಂಗ್ಲಾದೇಶದ ರೈತರನ್ನು ಜವಾನರು ತಡೆದಿದ್ದಾರೆ ಎನ್ನಲಾಗ್ತಿದೆ. ಇದಾದ ಬಳಿಕ ಸಿಟ್ಟಿಗೆದ್ದ 100ಕ್ಕೂ ಹೆಚ್ಚು ಬಾಂಗ್ಲಾದೇಶೀಯರು ಬಿಎಸ್‌ಎಫ್ ಯೋಧರ ಮೇಲೆ ದೊಣ್ಣೆ ಮತ್ತು ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದಾಳಿ ವೇಳೆ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಯೋಧರ ತಲೆ ಮತ್ತು ದೇಹದ ಮೇಲೆ ಹಲವೆಡೆ ಗಾಯಗಳಾಗಿವೆ. ದಾಳಿ ನಡೆಸಿದ ಬಳಿಕ ದುಷ್ಕರ್ಮಿಗಳು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ. ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ ಬಿಎಸ್‌ಎಫ್‌ನಿಂದ ಹೆಚ್ಚಿನ ಜವಾನರನ್ನು ಸ್ಥಳಕ್ಕೆ ರವಾನಿಸಲಾಗಿದೆ. ಇದಾದ ಬಳಿಕ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಿಜಿಬಿ ಅಧಿಕಾರಿಗಳಿಗೆ ಮಾಹಿತಿ: ಘಟನೆಯ ಬಗ್ಗೆ ಬಿಎಸ್ಎಫ್ ಅಧಿಕಾರಿಗಳು ತಕ್ಷಣವೇ ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶ (ಬಿಜಿಬಿ) ಅಧಿಕಾರಿಗಳಿಗೆ ಮಾಹಿತಿ ನೀಡಿದರು ಮತ್ತು ಬಾಂಗ್ಲಾದೇಶಿ ದುಷ್ಕರ್ಮಿಗಳಿಂದ ಜವಾನರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಲು ಸಭೆ ಆಯೋಜಿಸಲು ಹೇಳಿದರು.
ಈ ಹಿಂದೆಯೂ ಸಹ ಭಾರತೀಯ ರೈತರ ಬೆಳೆಗಳನ್ನು ನಾಶಪಡಿಸಿದ ಅನೇಕ ಘಟನೆಗಳು ನಡೆದಿವೆ. ಈ ಘಟನೆಗಳನ್ನು BGB ಗೆ ವರದಿ ಮಾಡಲಾಗಿದೆ. ಆದರೆ, ಅಂತಹ ಘಟನೆಗಳನ್ನು ನಿಲ್ಲಿಸಲು ಯಾವುದೇ ನಿರ್ದಿಷ್ಟ ಕ್ರಮವನ್ನು ತೆಗೆದುಕೊಂಡಿಲ್ಲ. ಅದೇ ಸಮಯದಲ್ಲಿ, ಈ ಪ್ರಕರಣದಲ್ಲಿ ಬಿಎಸ್ಎಫ್ ಅಪರಿಚಿತ ಬಾಂಗ್ಲಾದೇಶಿ ದಾಳಿಕೋರರ ವಿರುದ್ಧ ರನಿತಾಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಕ್ಷಿಣ ಬಂಗಾಳದ ಗಡಿಭಾಗದ ವಕ್ತಾರರು ಹೇಳಿದ್ದು ಹೀಗೆ: ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಬಂಗಾಳ ಗಡಿಭಾಗದ ವಕ್ತಾರರು, ಕಳ್ಳಸಾಗಾಣಿಕೆದಾರರು ಮತ್ತು ಕ್ರಿಮಿನಲ್ ಉದ್ದೇಶ ಹೊಂದಿರುವ ಜನರು ಗಡಿ ಉದ್ದಕ್ಕೂ ತಮ್ಮ ಅಕ್ರಮ ಚಟುವಟಿಕೆಗಳಲ್ಲಿ ಯಶಸ್ವಿಯಾಗದಿದ್ದಾಗ ಇಂತಹ ಘಟನೆಗಳು ನಡೆಯುತ್ತವೆ. ಈ ಹಿನ್ನೆಲೆ ಜವಾನರ ಮೇಲೆ ದಾಳಿ ನಡೆದಿರಬಹುದು. ಬಿಎಸ್‌ಎಫ್ ಯೋಧರ ಮೇಲೆ ದುಷ್ಕರ್ಮಿಗಳು ಮತ್ತು ಅವರ ಸಹಚರರು ಯೋಜಿತ ರೀತಿಯಲ್ಲಿ ಈ ಹಿಂದೆ ಹಲವು ಬಾರಿ ದಾಳಿ ನಡೆಸಿದ್ದಾರೆ. ಜವಾನರು ದುಷ್ಕರ್ಮಿಗಳ ಯೋಜನೆಗಳನ್ನು ಯಶಸ್ವಿಯಾಗಲು ಬಿಡುತ್ತಿಲ್ಲ. ನಿರ್ಮಲಚಾರ್ ಪ್ರದೇಶದಲ್ಲಿ ಜವಾನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸೌಲಭ್ಯಗಳಿಲ್ಲದಿದ್ದರೂ ಬಿಎಸ್ಎಫ್ ಸಿಬ್ಬಂದಿ ಹಗಲು ರಾತ್ರಿ ಗಡಿ ಕಾಯುತ್ತಿರುತ್ತಾರೆ ಎಂದರು.
ಓದಿ: ಭಾರತ - ಪಾಕ್ ಗಡಿಯಲ್ಲಿ ಮತ್ತೆ ಡ್ರೋನ್ ಹಾವಳಿ.. 23 ಸುತ್ತು ಗುಂಡಿನ ದಾಳಿ ನಡೆಸಿದ ಭದ್ರತಾ ಪಡೆ