ನವದೆಹಲಿ: ಪಶ್ಚಿಮ ಏಷ್ಯಾದ ದೇಶಗಳಿಗೆ ಭೇಟಿ ನೀಡುವಿಕೆಯನ್ನು ಉತ್ತೇಜಿಸುವ ಯತ್ನದಲ್ಲಿ ಬಾಂಗ್ಲಾದೇಶದ ಹೊಸ ಪಾಸ್‌ಪೋರ್ಟ್‌ಗಳಲ್ಲಿ ಇಸ್ರೇಲ್ ದೇಶವು ಸಿಂಧುತ್ವ ಪಡೆದುಕೊಂಡಿದೆ. ಆದರೆ, ಇಸ್ರೇಲ್-ಪ್ಯಾಲೆಸ್ತೇನ್ ವಿಷಯದಲ್ಲಿ ದೇಶದ ನಿಲುವು ಬದಲಾಗದೇ ಉಳಿಯುತ್ತದೆ ಎಂದು ಬಾಂಗ್ಲಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇಸ್ರೇಲ್ ಹೊರತುಪಡಿಸಿ ಎಲ್ಲ ದೇಶಗಳಲ್ಲಿ ಮಾನ್ಯ” ಎಂಬ ಪದಗಳನ್ನು ಇದುವರೆಗೆ ಬಾಂಗ್ಲಾದ ಪಾಸ್‌ಪೋರ್ಟ್ ಹೊಂದಿತ್ತು. ಈ ಪದಗಳನ್ನು ತೆಗೆದುಹಾಕುವ ಕ್ರಮವು ‘ಜಾಗತಿಕ ಮಾನದಂಡಗಳನ್ನು ಕಾಯ್ದುಕೊಳ್ಳುವ’ ಪ್ರಯತ್ನವಾಗಿದೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಹೇಳಿರುವುದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಇಸ್ರೇಲ್ ಬಗ್ಗೆ ಬಾಂಗ್ಲಾದೇಶದ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ, ಏಕೆಂದರೆ ಅದು ಇನ್ನೂ ಇಸ್ರೇಲ್ ಅನ್ನು ಒಂದು ದೇಶವಾಗಿ ಗುರುತಿಸುವುದಿಲ್ಲ. ಹೊಸ ಪಾಸ್‌ಪೋರ್ಟ್‌ನಲ್ಲಿ ‘ಇಸ್ರೇಲ್ ಹೊರತುಪಡಿಸಿ’ ಪದಗಳನ್ನು ತೆಗೆದು ಹಾಕುವುದರಿಂದ ಬಾಂಗ್ಲಾದೇಶದ ನಿಲುವಿನಲ್ಲಿ ಬದಲಾವಣೆಯಾಗಿದೆ ಎಂದು ಅರ್ಥವಲ್ಲ ”ಎಂದು ಮೊಮೆನ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಉದ್ವಿಗ್ನತೆ ಹೆಚ್ಚಿದ್ದ ಸಂದರ್ಭದಲ್ಲಿ ಬಾಂಗ್ಲಾದೇಶವು ಈ ನಿರ್ಧಾರಕ್ಕೆ ಬಂದಿದೆ. ಎರಡೂ ಕಡೆಯವರು ರಾಕೆಟ್ ದಾಳಿ ಮತ್ತು ವೈಮಾನಿಕ ದಾಳಿಯನ್ನು ನಡೆಸಿ ಸಾವಿರಾರು ನಾಗರಿಕರನ್ನು ಕೊಂದು ಹಾಕಿದ್ದರು. 11 ದಿನಗಳ ಉಗ್ರ ಹಿಂಸಾಚಾರದ ನಂತರ, ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಹಮಾಸ್ ಎರಡೂ ಮೇ 21 ರಂದು ಕದನ ವಿರಾಮಕ್ಕೆ ಕರೆ ನೀಡಿವೆ.
“ಹಳೆಯ ಪಾಸ್‌ಪೋರ್ಟ್‌ಗಳಲ್ಲಿ ಆ ಷರತ್ತು ಇತ್ತು. ಆದರೆ, ಈಗ ಅದನ್ನು ತೆಗೆದುಹಾಕಿ ಹೊಸ ಪಾಸ್‌ಪೋರ್ಟ್‌ಗಳನ್ನು ನೀಡಲಾಗುವುದು. ಬಾಂಗ್ಲಾದೇಶ ಇನ್ನೂ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಲ್ಲ ಮತ್ತು ಅದು ಇಸ್ರೇಲ್ ಅನ್ನು ಒಂದು ದೇಶವಾಗಿ ಗುರುತಿಸುವುದಿಲ್ಲ ” ಎಂದು ಅವರು ಹೇಳಿದರು.
ಈ ಬೆಳವಣಿಗೆ ಸ್ವಾಗತಿಸಿರುವ ಇಸ್ರೇಲ್ ಬಾಂಗ್ಲಾದೇಶವನ್ನು ತಮ್ಮ ದೇಶದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಬೆಳೆಸುವಂತೆ ಒತ್ತಾಯಿಸಿದೆ.