ಪ್ರತಿ ವರ್ಷ ಜಗತ್ತಿನಾದ್ಯಂತ ಸಂಭವಿಸುವ 5.4 ಲಕ್ಷ ಸಾವುಗಳಿಗೆ ಖಾದ್ಯ ತೈಲಗಳು, ವನಸ್ಪತಿ ಮತ್ತು ಕೃತಕ ಬೆಣ್ಣೆಯಲ್ಲಿ ಬಳಸುವ ಪರಿಷ್ಕರಿಸಿದ ಕೊಬ್ಬಿನ ಅಂಶವೇ (ಟಿಎಫ್‌ಎ – ಟ್ರಾನ್ಸ್ ಫ್ಯಾಟಿ ಆ್ಯಸಿಡ್) ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಎಚ್ಚರಿಕೆ ನೀಡುತ್ತಲೇ ಬಂದಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗಲು ಮತ್ತು ರಕ್ತಪರಿಚಲನೆ ವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮದಿಂದಾಗಿ ಸಂಭವಿಸುವ ಕಾಯಿಲೆಗಳಿಗೆ ಟಿಎಫ್‌ಎ ಕಾರಣ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), 2023ರ ಹೊತ್ತಿಗೆ ಜಗತ್ತಿನ ಎಲ್ಲಾ ದೇಶಗಳಿಂದ ಟಿಎಫ್‌ಎ ನಿಷೇಧವಾಗಬೇಕು ಎಂದು ಕರೆ ಕೊಟ್ಟಿದೆ.
ಇದಕ್ಕಾಗಿ "ರಿಪ್ಲೇಸ್" (ಬದಲಿಸಿ) ಎಂಬ ಶೀರ್ಷಿಕೆಯ ಆರು ಅಂಶಗಳ ಕ್ರಿಯಾ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಸ್ತಾಪಿಸಿದೆ. ಕೈಗಾರಿಕೆ ಚಟುವಟಿಕೆಗಳ ಮೂಲಕ ತಯಾರಿಸಿದ ಕೊಬ್ಬಿನ ಉತ್ಪನ್ನಗಳ ಬದಲಾಗಿ ಆರೋಗ್ಯ ಹೆಚ್ಚಿಸುವಂತಹ ಪರ್ಯಾಯಗಳನ್ನು ಅಳವಡಿಸಿಕೊಳ್ಳಲು ಅದು ಸಲಹೆ ಮಾಡಿದೆ. ಈ ಹಿನ್ನೆಲೆ ಸದರಿ ಶಿಫಾರಸುಗಳನ್ನು ಅನುಸರಿಸುವಂತೆ ಸಂಬಂಧಪಟ್ಟ ಎಲ್ಲರಿಗೂ ಕೇಂದ್ರ ಸರ್ಕಾರ 2018ರಲ್ಲಿಯೇ ನಿರ್ದೇಶನಗಳನ್ನು ನೀಡಿತ್ತು.
ಆಹಾರ ಭದ್ರತಾ ಸಂಸ್ಥೆ ತನ್ನ ಇತ್ತೀಚಿನ ಕ್ರಮಗಳಲ್ಲಿ ಈ ವರ್ಷ ಟಿಎಫ್‌ಎಯನ್ನು ಶೇ. 3ಕ್ಕೆ ನಿರ್ಬಂಧಿಸುವಂತೆ ಹಾಗೂ ಮುಂದಿನ ವರ್ಷದ ವೇಳೆಗೆ ಈ ಅಪಾಯಕಾರಿ ವಸ್ತುವಿನ ಬಳಕೆ ಪ್ರಮಾಣವನ್ನು ಶೇ. 2ಕ್ಕೆ ಇಳಿಸಲು ಕರೆ ನೀಡಿದೆ. 2011ರಲ್ಲಿ ಖಾದ್ಯ ತೈಲಗಳು ಮತ್ತು ಕೊಬ್ಬಿನ ಪದಾರ್ಥಗಳಲ್ಲಿ ಟಿಎಫ್‌ಎ ಮಿತಿಯನ್ನು ಸರ್ಕಾರ ಶೇ. 10ಕ್ಕೆ ನಿಗದಿಪಡಿಸಿತ್ತು. ನಂತರ 2015ರ ಹೊತ್ತಿಗೆ ಆ ಮಿತಿಯನ್ನು ಶೇ. 5ಕ್ಕೆ ಇಳಿಸಲಾಯಿತು.
ಟಿಎಫ್‌ಎ ಮೇಲೆ ನಿರ್ಬಂಧ ಹೇರಿದ ಜಗತ್ತಿನ ಮೊದಲ ದೇಶವೆಂದರೆ ಡೆನ್ಮಾರ್ಕ್. ಇದರ ಪರಿಣಾಮಗಳು ನಿಚ್ಚಳವಾಗಿವೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (ಒಇಸಿಡಿ –ಆರ್ಗನೈಜೇಶನ್ ಆಫ್ ಎಕನಾಮಿಕ್ ಕೋ-ಆಪರೇಶನ್ ಅಂಡ್ ಡೆವಲಪ್ಮೆಂಟ್) ಇತರ ದೇಶಗಳೊಂದಿಗೆ ಹೋಲಿಸಿದರೆ ಹೃದಯ ಸಮಸ್ಯೆಯಿಂದ ಉಂಟಾಗುವ ಸಾವು-ನೋವುಗಳು ಡೆನ್ಮಾರ್ಕ್‌ನಲ್ಲಿ ಸಾಕಷ್ಟು ಕಡಿಮೆಯಾಗಿವೆ. ಟಿಎಫ್ಎ ವಸ್ತುವಿನ ಸಂಪೂರ್ಣ ನಿಷೇಧಕ್ಕೆ ಸಂಬಂಧಿಸಿದಂತೆ ಚುರುಕಾದ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇರುವಾಗ, ಅದನ್ನು ಸಂಪೂರ್ಣವಾಗಿ ನಿಷೇಧಗೊಳಿಸುವುದನ್ನು ಬಿಟ್ಟು ಅಧಿಕಾರಿಗಳು ಅದನ್ನು ಹಂತಹಂತವಾಗಿ ಕಡಿಮೆ ಮಾಡಲು ಏಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ?.
ಅಧ್ಯಯನಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 77,000 ಟಿಎಫ್‌ಎ ಸಂಬಂಧಿತ ಸಾವುಗಳು ವರದಿಯಾಗುತ್ತಿವೆ. ಹೃದಯ ಸಮಸ್ಯೆಗಳು, ರಕ್ತದೊತ್ತಡ, ಮಧುಮೇಹ ಮತ್ತು ಸ್ಥೂಲಕಾಯತೆಯ ಹರಡುವಿಕೆಗೆ ಟಿಎಫ್‌ಎ ಕಾರಣ ಎಂದು ಗ್ರಾಹಕ ಸಂಸ್ಥೆಗಳು ಅಳಲು ವ್ಯಕ್ತಪಡಿಸಿವೆ. ಭಾರತವು ಈಗಾಗಲೇ ವಿಶ್ವದ ಮಧುಮೇಹ ರಾಜಧಾನಿಯಾಗಿರುವುದೂ ಇದೇ ಕಾರಣಕ್ಕೆ. ದೇಶದ 22 ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಆರೋಗ್ಯ ಸಮೀಕ್ಷೆಯಲ್ಲಿ ಸ್ಥೂಲಕಾಯದ ವ್ಯಕ್ತಿಗಳ ಪಟ್ಟಿಯಲ್ಲಿ ಪುರುಷರು 19 ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಗೊತ್ತಾಗಿದೆ. ಇನ್ನು ಅನೇಕ ರಾಜ್ಯಗಳಲ್ಲಿ ಮಹಿಳೆಯರೂ ಸಹ ಪುರುಷರಿಗೆ ಸಾಮಾನ್ಯವಾಗಿ ಸ್ಥೂಲಕಾಯತೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಇತರ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಮೇಲೆ ಕೋವಿಡ್ -19 ದುಪ್ಪಟ್ಟು ಮಾರಕ ಎಂಬ ಅಂಶದ ಹಿನ್ನೆಲೆ ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಈಗಿನ ಅಗತ್ಯವಾಗಿದೆ.
ಪೋಷಕಾಂಶಗಳ ಕೊರತೆ ಹಾಗೂ ಅದರ ಹೆಚ್ಚಳವಾದ ಬೊಜ್ಜಿನ ಸಮಸ್ಯೆಗಳೆರಡನ್ನೂ ಎದುರಿಸುತ್ತಿರುವ ವಿಪರ್ಯಾಸದ ಪರಿಸ್ಥಿತಿ ಭಾರತದ್ದು. ಇಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳ ರೀತಿಯೇ ಸಾಂಕ್ರಾಮಿಕ ರೋಗಗಳೂ ಸಕ್ರಿಯವಾಗಿವೆ. ಇಂತಹ ಸನ್ನಿವೇಶದಲ್ಲಿ ಆಹಾರ ಸುರಕ್ಷತಾ ಮಾನದಂಡಗಳು ಹೆಚ್ಚು ಬಲವಾಗಿರಬೇಕು. ದುರದೃಷ್ಟದ ಸಂಗತಿ ಎಂದರೆ ದೇಶದಲ್ಲಿ ಶೇ. 28.5ರಷ್ಟು ಆಹಾರ ಉತ್ಪನ್ನಗಳನ್ನು ಕಳಪೆ ಗುಣಮಟ್ಟದವು ಎಂದು ವರ್ಗೀಕರಿಸಲಾಗಿದೆ ಅಥವಾ ಅವು ನಿಗದಿತ ಮಾನದಂಡಗಳನ್ನು ಈಡೇರಿಸುವ ರೀತಿ ಇಲ್ಲ. ರಾಷ್ಟ್ರೀಯ ಆಹಾರ ಮಾನದಂಡಗಳ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಶೇಕಡಾ 39ರಷ್ಟು ಹಾಲಿನ ಉತ್ಪನ್ನಗಳಿಗೂ ಇದು ಅನ್ವಯವಾಗುತ್ತದೆ.
ಕಲಬೆರಕೆ ಆಹಾರದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಜನರು ಪ್ರತಿವರ್ಷ 1.78 ಲಕ್ಷ ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎಂದು ಸಂಸದೀಯ ಸ್ಥಾಯಿ ಸಮಿತಿ 2018ರಲ್ಲಿಯೇ ಬಹಿರಂಗಪಡಿಸಿತ್ತು. “ಈಟ್ ರೈಟ್ ಟು ಫೈಟ್ ಕೋವಿಡ್ -19” (ಕೋವಿಡ್-19 ಎದುರಿಸಲು ಸೂಕ್ತ ಆಹಾರ ಸೇವಿಸಿ) ಎಂಬ ಘೋಷಣೆಯನ್ನು ನೀಡುವುದರ ಜೊತೆಗೆ ಆಹಾರ ಮಾನದಂಡಗಳ ಸಂಸ್ಥೆಯು ವೈಯಕ್ತಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಆದಾಗ್ಯೂ ಸಂಸ್ಥೆಯು ತನ್ನ ಕೆಲಸದ ಪ್ರವೃತ್ತಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಸಮಯ ಈಗ ಬಂದಿದೆ. ಮುಂದಿನ ವರ್ಷದ ವೇಳೆಗೆ ಟಿಎಫ್‌ಎ ಅನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ಆಹಾರ ಸುರಕ್ಷತೆಗೆ ಸಂಸ್ಥೆ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಿದೆ. ಆಗ ಮಾತ್ರ ಆರೋಗ್ಯಕರ ಭಾರತ ಪರಿಕಲ್ಪನೆ ಸಾಕಾರವಾಗಬಹುದು.