ನವದೆಹಲಿ : ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದ ಮೇಲೆ ಬಂಧಿತನಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ರತನ್ ಲಾಲ್ಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. 50 ಸಾವಿರ ರೂಪಾಯಿ ಬಾಂಡ್ ಪಡೆದುಕೊಂಡಿದೆ.
ದೆಹಲಿ ವಿಶ್ವವಿದ್ಯಾನಿಲಯದ ಹಿಂದೂ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ರತನ್ ಲಾಲ್ ಧರ್ಮದ ಆಧಾರದ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ. ಸೌಹಾರ್ದತೆ ಕಾಪಾಡುವ ಬದಲು ಪೂರ್ವಾಗ್ರಹ ಪೀಡಿತರಾಗಿ ಧರ್ಮಗಳ ಮಧ್ಯೆ ಕಿಡಿ ಹೊತ್ತಿಸಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿತ್ತು.
ಪ್ರಾಧ್ಯಾಪಕ ರತನ್ ಲಾಲ್ ಬಂಧನದ ಬಳಿಕ ತೀಸ್ ಹಜಾರಿ ನ್ಯಾಯಾಲಯದಲ್ಲಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿದ್ಧಾರ್ಥ ಮಲಿಕ್ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ಗೆ ಪ್ರಾಧ್ಯಾಪಕ ಜಾಮೀನು ಮತ್ತು ರಕ್ಷಣೆ ಕೋರಿದರು.
ಉತ್ತರಿಸಲು ಅವಕಾಶ ನೀಡಿ : ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣ ಕುರಿತು ಪೊಲೀಸರು ಆರೋಪಿಗೆ ನೋಟಿಸ್ ನೀಡಿಲ್ಲ, ಉತ್ತರಿಸಲೂ ಅವರಿಗೆ ಅವಕಾಶ ನೀಡಿಲ್ಲ. ಪ್ರಾಧ್ಯಾಪಕರು ಅಪರಾಧಿ ಅಲ್ಲ ಮತ್ತು ಎಲ್ಲಿಯೂ ಓಡಿ ಹೋಗುವುದಿಲ್ಲ. ಹೀಗಾಗಿ, ಅವರಿಗೆ ಜಾಮೀನು ನೀಡಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅಲ್ಲದೇ, ಒಬ್ಬ ವ್ಯಕ್ತಿಯ ಅಭಿಪ್ರಾಯ ಇಡೀ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಆರೋಪಿಯು ಪ್ರಸ್ತುತ ಎಫ್‌ಐಆರ್‌ಗೆ ಕಾರಣವಾದ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಅಥವಾ ಸಂದರ್ಶನಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಕೋರ್ಟ್ ಸೂಚಿಸಿದೆ.
ನ್ಯಾಯಾಂಗ ಬಂಧನಕ್ಕೆ ಅರ್ಜಿ : ಈ ಮಧ್ಯೆಯೇ ದೆಹಲಿ ಪೊಲೀಸರು ರತನ್ ಲಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕಿದ ಪೋಸ್ಟ್‌ಗಳು ಸಮಾಜದ ಮೇಲೆ ಪರಿಣಾಮ ಬೀರುವುದರಿಂದ ಪ್ರಕರಣವು ಗಂಭೀರವಾಗಿದೆ ಎಂದು ಪೊಲೀಸರು ವಾದಿಸಿದ್ದಾರೆ.
ಓದಿ: ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್: ಹಿಂದೂ ಕಾಲೇಜಿನ ಪ್ರಾಧ್ಯಾಪಕ ಅರೆಸ್ಟ್, ವಿದ್ಯಾರ್ಥಿಗಳ ಪ್ರೊಟೆಸ್ಟ್