ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಿಢೀರ್ ರಾಜಕೀಯ ಬೆಳವಣಿಗೆಯಾಗಿದ್ದು, ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದ ಬಾಬುಲ್ ಸುಪ್ರೀಯೋ ಅವರು ಇಂದು ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಸಂಸದ ಡೆರೆಕ್ ಒ'ಬ್ರಿಯೆನ್ ಅವರು ಪಕ್ಷಕ್ಕೆ ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವರಾಗಿ ಸೇವೆ ಸಲಿಸಿದ್ದ ಸಂಸದ ಬಾಬುಲ್ ಸುಪ್ರಿಯೋ ಇದೇ ಜುಲೈನಲ್ಲಿ ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಅವರ ನಡೆ ತೀವ್ರ ಚರ್ಚೆಗೂ ಗ್ರಾಸವಾಗಿತ್ತು. ಇದೀಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ಸೇರ್ಪಡೆ ಮೂಲಕ ರಾಜಕೀಯ ನಿವೃತ್ತಿಯಿಂದ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರಿಯೆನ್ ನೇತೃತ್ವದಲ್ಲಿ ಬಾಬುಲ್ ಸುಪ್ರಿಯೋ ಇಂದು ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದೇವೆ ಎಂದು ಬರೆದುಕೊಂಡಿದೆ.
ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಸಂಸದ ಸುಪ್ರಿಯೋ, ಜುಲೈನಲ್ಲಿ ರಾಜಕೀಯ ತೊರೆಯುವ ನಿರ್ಧಾರ ಪ್ರಕಟಿಸಿದ್ದರು. ಈ ವರ್ಷ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತ್ತು. ಪಶ್ಚಿಮ ಬಂಗಾಳ ಬಿಜೆಪಿ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಸುಪ್ರಿಯೋ ಸುಳಿವು ನೀಡಿದ್ದರು. ಬಳಿಕ ಅವರು ತಮ್ಮ ಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು.
ಟಿಸಿಎಂ ಸೇರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುಲ್ ಸುಪ್ರಿಯೋ, ನಾನು ರಾಜಕೀಯವನ್ನು ತೊರೆಯುತ್ತೇನೆ ಎಂದು ಹೇಳಿದಾಗ ಅದನ್ನು ನಾನು ನನ್ನ ಹೃದಯಾಂತರಾಳದಿಂದ ಹೇಳಿದ್ದೆ. ಆದರೆ, ಟಿಸಿಎಂ ಸೇರುವ ಒಂದು ದೊಡ್ಡ ಅವಕಾಶವಿದೆ ಎಂದು ನಂತರ ನಾನು ಭಾವಿಸಿದೆ. ನನ್ನ ಸ್ನೇಹಿತರೆಲ್ಲರೂ ರಾಜಕೀಯವನ್ನು ತೊರೆಯುವ ನನ್ನ ನಿರ್ಧಾರ ತಪ್ಪು ಹಾಗೂ ಭಾವನಾತ್ಮಕವಾಗಿದೆ ಎಂದು ಹೇಳಿದ್ದರು ಎಂದಿದ್ದಾರೆ.
ನಾನು ನನ್ನ ನಿರ್ಧಾರವನ್ನು ಬದಲಾಯಿಸುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಬಂಗಾಳಕ್ಕೆ ಸೇವೆ ಸಲ್ಲಿಸುವ ಉತ್ತಮ ಅವಕಾಶಕ್ಕಾಗಿ ಮರಳಿ ಬರುತ್ತಿದ್ದೇನೆ. ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ದೀದಿಯನ್ನು(ಸಿಎಂ ಮಮತಾ ಬ್ಯಾನರ್ಜಿ) ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.
ದೀದಿ ಮತ್ತು ಅಭಿಷೇಕ್ ನನಗೆ ಒಂದು ಉತ್ತಮ ಅವಕಾಶವನ್ನು ನೀಡಿದ್ದಾರೆ. ನಾನು ಟಿಎಂಸಿಗೆ ಸೇರಿದ ಕಾರಣ, ಅಸನ್ಸೋಲ್‌ನಲ್ಲಿ ನನ್ನ ಸ್ಥಾನವನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ನಾನು ಅಸನ್ಸೋಲ್‌ನಿಂದಾಗಿ ರಾಜಕೀಯಕ್ಕೆ ಬಂದಿದ್ದೇನೆ. ಆ ಕ್ಷೇತ್ರಕ್ಕಾಗಿ ನಾನು ಸಾಧ್ಯವಾದಷ್ಟು ಸೇವೆ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ‘goodbye' ರಾಜಕೀಯಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ BJP MP ಬಾಬುಲ್ ಸುಪ್ರಿಯೋ!