ಲಖನೌ (ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮತ್ತು ದ್ವೇಷ ಭಾಷಣ ಮಾಡಿದ್ದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
2019ರ ಲೋಕಸಭೆ ಚುನಾವಣೆಯ ಸಾರ್ವಜನಿಕ ಸಭೆಯಲ್ಲಿ ಅಜಂ ಖಾನ್ ಮಾಡಿದ್ದ ಭಾಷಣದ ವೇಳೆ ಪ್ರಧಾನಿ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ವಿರುದ್ಧ ಅವಹೇಳನಕಾರಿಯಾಗಿ ಟೀಕಿಸಿದ್ದರು. ಅಲ್ಲದೇ, ಕೋಮ ಸೌಹಾರ್ದತೆ ಕೆರಳಿಸುವ ಮಾತನಾಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಬಿಜೆಪಿ ದೂರು ದಾಖಲಿಸಿತ್ತು.
ಇದನ್ನೂ ಓದಿ: ಸುದ್ದಿ, ಸಂದೇಶ ಫಾರ್ವರ್ಡ್ ಮಾಡುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿ: ಪ್ರಧಾನಿ ಮೋದಿ
ಈ ಪ್ರಕರಣದ ವಿಚಾರಣೆ ನಡೆಸಿದ್ದ ರಾಂಪುರ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಗುರುವಾರ ಅಜಂ ಖಾನ್ರನ್ನು ದೋಷಿ ಎಂದು ಘೋಷಿಸಿ ಮೂರು ವರ್ಷ ಜೈಲು ಶಿಕ್ಷೆ, 25 ಸಾವಿರ ರೂ ದಂಡ ವಿಧಿಸಿತ್ತು. ಎರಡು ವರ್ಷಕ್ಕಿಂತ ಅಧಿಕ ಜೈಲು ಶಿಕ್ಷೆಗೆ ಒಳಗಾಗುವ ಜನಪ್ರತಿನಿಧಿ ತನ್ನ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅಂತೆಯೇ, ಮೂರು ವರ್ಷ ಜೈಲು ಶಿಕ್ಷಗೆ ಗುರಿಯಾಗಿರುವ ಅಜಂ ಖಾನ್ ಈಗ ಉತ್ತರ ಪ್ರದೇಶದ ವಿಧಾನಸಭೆಯಿಂದ ಅನರ್ಹಗೊಂಡಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ತಿಳಿಸಿದ್ದಾರೆ.
2017ರಲ್ಲಿ ರಾಂಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಅಜಂ ಖಾನ್, 2019ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಯ ಸಾಧಿಸಿದ್ದರು. ಇದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದರಾಗಿ ಮುಂದುವರೆದಿದ್ದರು. ಆದರೆ, 2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅದೇ ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಾಸಕರಾಗಿಯೇ ಮುಂದುವರೆದಿದ್ದರು.
ಇದನ್ನೂ ಓದಿ: ದ್ವೇಷ ಭಾಷಣ: ಎಸ್ಪಿ ಸಂಸದ ಅಜಂ ಖಾನ್ಗೆ 3 ವರ್ಷ ಜೈಲು ಶಿಕ್ಷೆ