ನವದೆಹಲಿ: ಕೆಲ ದಿನಗಳ ಹಿಂದೆ ದೆಹಲಿಯ ಯಮುನಾ ಹೆದ್ದಾರಿಯಲ್ಲಿ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತಷ್ಟು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಬೇರೆ ಜಾತಿಯ ಯುವಕನನ್ನು ಮದುವೆಯಾದ ಕಾರಣಕ್ಕೆ ಪೋಷಕರೇ ಕೊಲೆ ಮಾಡಿರುವುದು ಬಯಲಾಗಿದ್ದು, ತಂದೆ ಮತ್ತು ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ನ.18ರಂದು ಯಮುನಾ ಹೆದ್ದಾರಿಯಲ್ಲಿ ಟ್ರಾಲಿ ಸೂಟ್‌ಕೇಸ್‌ನಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ದೆಹಲಿ ಪೊಲೀಸರು, ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ಯುವತಿಯನ್ನು ದೆಹಲಿ ನಿವಾಸಿ ಆಯುಷಿ ಯಾದವ್ (21) ಎಂದು ಗುರುತಿಸಲಾಗಿದೆ. ಆಯುಷಿ ತಂದೆ ನಿತೇಶ್ ಯಾದವ್ ಮತ್ತು ತಾಯಿ ಬ್ರಜ್ಬಾಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಗಳು ಡಾಕ್ಟರ್ ಆಗುವ ಕನಸು ಕಂಡಿದ್ದ ಪೋಷಕರು: ಆಯುಷಿ ದೆಹಲಿ ಗ್ಲೋಬಲ್ ಸ್ಕೂಲ್ ಆಫ್ ಟೆಕ್ನಾಲಜಿಯಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಬಿಸಿಎ)ಯ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ಓದಿನಲ್ಲಿ ತುಂಬಾ ಮುಂದೆ ಇದ್ದ ಆಯುಷಿ ನೀಟ್ ಪ್ರವೇಶ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದರು.
ಆದರೆ, ಸಂದರ್ಶನಕ್ಕೆ ಹಾಜರಾಗಲಿಲ್ಲ. ಪೋಷಕರು ಆಯುಷಿ ಡಾಕ್ಟರ್ ಆಗುವುದನ್ನು ನೋಡಲು ಬಯಸಿದ್ದರು. ಆದರೆ, ನೀಟ್ ಪರೀಕ್ಷೆ ಪಾಸ್ ಆಗಿದ್ದರೂ ಕೂಡ ಸಂದರ್ಶನಕ್ಕೆ ಹಾಜರಾಗದ ಬಗ್ಗೆ ಪೋಷಕರು ಅಸಮಾಧಾನಗೊಂಡಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ: ಇದರ ನಡುವೆ ಒಂದು ವರ್ಷದ ಹಿಂದೆ ಆಯುಷಿ ತನ್ನ ಸಹಪಾಠಿ ಭರತ್‌ಪುರದ ನಿವಾಸಿ ಛತ್ರಪಾಲ್ ಗುರ್ಜರ್ ಅವರನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಇದರಿಂದಲೂ ತಂದೆ ನಿತೇಶ್ ಯಾದವ್ ಮತ್ತು ತಾಯಿ ಬ್ರಜ್ಬಾಲಾ ತೀವ್ರ ಅಸಮಾಧಾನಗೊಂಡಿದ್ದರು.
ಅಂತರ್ಜಾತಿ ವಿವಾಹ ಬಗ್ಗೆ ಆಯುಷಿಯನ್ನು ಮನವೊಲಿಸಲು ಆರಂಭದಲ್ಲಿ ಪೋಷಕರು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ಆಕೆ ವಯಸ್ಕಳಾಗಿರುವುದರಿಂದ ತಾನು ಸ್ವಂತ ಬುದ್ಧಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಆಯುಷಿ ಸಮರ್ಥಿಸಿಕೊಂಡಿದ್ದರು. ಡಿಸೆಂಬರ್ 1ಕ್ಕೆ ಆಯುಷಿಗೆ 22 ವರ್ಷ ತುಂಬುತ್ತಿತ್ತು ಎಂದು ಹಂಗಾಮಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಂ. ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಿಯತಮೆಯೊಂದಿಗೆ ತನಗೂ ಬೆಂಕಿ ಹಂಚಿಕೊಂಡಿದ್ದ ಯುವಕ ಸಾವು
ಆದರೆ, ಮದುವೆ ವಿಷಯದಲ್ಲಿ ಕುಟುಂಬವು ಎಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಮೇಲಾಗಿ ತನ್ನ ಇಚ್ಛೆಯಂತೆ ಮದುವೆಯಾದ ನಂತರ ಆಯುಷಿ ತನಗೆ ಬೇಕಾದಾಗ ಗಂಡನ ಮನೆಯಿಂದ ತವರು ಮನೆಗೆ ಬರುತ್ತಿದ್ದರು. ಇದರಿಂದ ತಮ್ಮ ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆಯಾಗುತ್ತಿದೆ ಎಂದು ಆಯುಷಿ ಪೋಷಕರು ಭಾವಿಸಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಗುಂಡು ಹಾರಿಸಿ ಮಗಳ ಕೊಲೆ: ನ.17ರಂದು ಆಯುಷಿ ಎಂದಿನಂತೆ ನನ್ನ ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದರು. ಈ ವೇಳೆ ಕೋಪದಲ್ಲಿ ತಂದೆ ನಿತೇಶ್ ಯಾದವ್ ರಿವಾಲ್ವರ್‌ನಿಂದ ಆಕೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ತಾಯಿ ಬ್ರಜ್ಬಾಲಾ ಕೂಡ ಸಾಥ್ ನೀಡಿದ್ದರು. ಎರಡು ಗುಂಡುಗಳನ್ನು ಆಯುಷಿ ಮೇಲೆ ಹಾರಿಸಲಾಗಿತ್ತು.
ಅದರಲ್ಲಿ ಒಂದು ಗುಂಡು ಎದೆ ಮತ್ತು ಇನ್ನೊಂದು ಗುಂಡು ತಲೆಗೆ ಹೊಕ್ಕಿತ್ತು. ಆಯುಷಿ ಮರಣೋತ್ತರ ಪರೀಕ್ಷೆಯನ್ನು ಮೂವರು ವೈದ್ಯರ ಸಮಿತಿ ನಡೆಸಿದ್ದು, ಈ ಮರಣೋತ್ತರ ಪರೀಕ್ಷೆ ವಿಡಿಯೋಗ್ರಾಫಿ ಸಹ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊಲೆಗಾರ ತಂದೆಯಿಂದ ಮಗಳ ಚಿತೆಗೆ ಬೆಂಕಿ: ಏತನ್ಮಧ್ಯೆ, ಸೋಮವಾರ ಆಯುಷಿಯ ಅಂತ್ಯಸಂಸ್ಕಾರ ನೆರವೇರಿದೆ. ಪೊಲೀಸರ ವಶದಲ್ಲಿರುವ ಲಕ್ಷ್ಮಿನಗರ ಪ್ರದೇಶದಲ್ಲಿ ಪೋಷಕರೇ ಅಂತ್ಯಸಂಸ್ಕಾರ ಪೂರ್ಣಗೊಳಿಸಿದ್ದು, ಕೊಲೆಗಾರ ತಂದೆಯೇ ಮಗಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಆದರೆ, ತಂದೆ ಕೃತ್ಯದ ಕೃತ್ಯದ ಬಗ್ಗೆ ತಿಳಿದಿದ್ದ ಆಕೆಯ ಸಹೋದರು ಅಂತ್ಯಸಂಸ್ಕಾರದಲ್ಲಿ ಹಾಜರಿರಲಿಲ್ಲ.
ಇದನ್ನೂ ಓದಿ: ಕೋಪದಲ್ಲಿ ಕತ್ತು ಹಿಸುಕಿ ಕೊಂದು 35 ಪೀಸ್ ಮಾಡಿದೆ: ಕೋರ್ಟ್ಗೆ ತಿಳಿಸಿದ ಶ್ರದ್ಧಾ ಹಂತಕ ಅಫ್ತಾಬ್