ಲಖನೌ: ಅಯೋಧ್ಯಾ ಭೂ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಸಂಪುಟ ಸಚಿವ ಮತ್ತು ರಾಜ್ಯ ಸರ್ಕಾರದ ವಕ್ತಾರ ಸಿದ್ಧಾರ್ಥ್ ನಾಥ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವಿಷಯ ಗಂಭೀರವಾಗಿದ್ದು, ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದಾರೆ. ಅದರ ಆಧಾರದ ಮೇಲೆ ತನಿಖಾ ಸಮಿತಿ ರಚಿಸಲಾಗಿದೆ ಮತ್ತು ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮವನ್ನು ಆರಂಭಿಸಲಾಗುವುದು ಎಂದು ಹೇಳಿದರು.
ನಮ್ಮ ಸರ್ಕಾರವು ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತದೆ ಇಂತಹ ತಪ್ಪು ಕೆಲಸಗಳನ್ನು ಸಹಿಸುವುದಿಲ್ಲ. ನಾವು ಎಂದಿಗೂ ಭ್ರಷ್ಟಾಚಾರವನ್ನು ಉತ್ತೇಜಿಸುವುದಿಲ್ಲ. ಈ ಸಂಬಂಧ ಮನೋಜ್ ಸಿಂಗ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ) ತನಿಖಾ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ತನಿಖಾ ಸಮಿತಿ ವರದಿ ಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದಾರ್ಥ್ ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿ ಹಣ ಲೂಟಿ ಮಾಡಿದೆ, ಅಯೋಧ್ಯಾ ಭೂ ಹಗರಣದಲ್ಲಿ ಸುಪ್ರೀಂ ತನಿಖೆ ಆಗಬೇಕು: ಪ್ರಿಯಾಂಕಾ ಗಾಂಧಿ
ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಹಲವು ದಾಖಲೆಗಳ ಸಮೇತ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಸಂಬಂಧಿಗಳು ಶಾಮೀಲಾಗಿದ್ದ ಬಗ್ಗೆ ಮಾಹಿತಿ ಹೊರತಂದ ನಂತರ ಅಯೋಧ್ಯಾ ಭೂ ಖರೀದಿ ಹಗರಣ ಸಾರ್ವಜನಿಕವಾಗಿ ಬಹಿರಂಗವಾಯಿತು. ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಬಿಜೆಪಿ ನಾಯಕರು ಲೂಟಿಯಲ್ಲಿ ತೊಡಗಿದ್ದಾರೆ ಎಂದು ಸಿಂಗ್ ಆರೋಪಿಸಿದ್ದರು.
ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯಾ ಭೂ ಖರೀದಿ ಹಗರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದರು.