ಎರ್ನಾಕುಲಂ: ತಮ್ಮ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣದ ವಿರುದ್ಧ ಚಲನಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಾವು ರಾಜಧಾನಿ ಕವರಟ್ಟಿಗೆ ಬಂದರೆ ಬಂಧಿಸುವ ಸಾಧ್ಯತೆಯಿದೆ ಎಂದು ಆಯೆಷಾ ಮನವಿ ಅರ್ಜಿಯಲ್ಲಿ ತಿಳಿಸಿದ್ದಾರೆ. ನಾಳೆ ಕೇರಳ ನ್ಯಾಯಾಲಯ ಆಯೆಷಾ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ಲಕ್ಷದ್ವೀಪದ ನಟಿ ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹ ಕೇಸ್ ದಾಖಲು
ಆಯೆಷಾ ಸುಲ್ತಾನಾ ಅವರು ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿಗಳು ಜಾರಿಗೆ ತಂದ ವಿವಾದಾತ್ಮಕ ನಿರ್ಧಾರಗಳ ಬಗ್ಗೆ ತೀವ್ರ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಮಲಯಾಳಂ ಟಿವಿ ಚಾನೆಲ್‌ನಲ್ಲಿ ನಡೆದ ಚರ್ಚೆಯ ವೇಳೆ ಲಕ್ಷದ್ವೀಪದಲ್ಲಿ ಕೋವಿಡ್-19 ಹರಡಲು ಕೇಂದ್ರ ಸರ್ಕಾರವು ಜೈವಿಕ ಅಸ್ತ್ರಗಳನ್ನು ಬಳಸಿದೆ ಎಂದು ಆಯಿಷಾ ಆರೋಪಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಕವರಟ್ಟಿ ಪೊಲೀಸರಿಗೆ ಸಲ್ಲಿಕೆಯಾದ ದೂರಿನಲ್ಲಿ, ಆಯಿಷಾ ಸುಲ್ತಾನ ಅವರು ಚಾನೆಲ್ ಚರ್ಚೆಯ ವೇಳೆ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರನ್ನು ಜೈವಿಕ ಅಸ್ತ್ರ ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ನಿರ್ಮಾಪಕಿ ಆಯೇಷಾ ವಿರುದ್ಧ 124ಎ ಮತ್ತು 153ಬಿ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿಯ ಲಕ್ಷದ್ವೀಪ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್ ಪೊಲೀಸರಿಗೆ ದೂರು ನೀಡಿದ್ದಾರೆ.