ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕ್ಯಾಬಿನೆಟ್ ಸಚಿವ ಮುಖೇಶ್ ಸಹಾನಿ ಅವರನ್ನು ತಮ್ಮ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ. ಬಿಜೆಪಿ ಸಹಾನಿ ಅವರನ್ನು ವಜಾಗೊಳಿಸುವಂತೆ ಪಟ್ಟು ಹಿಡಿದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಹಾನಿ ಅವರನ್ನ ಬಿಜೆಪಿಯಿಂದ ಎನ್‌ಡಿಎಗೆ ನಿತೀಶ್ ಕುಮಾರ್ ಕರೆ ತಂದಿದ್ದರು.
ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವರು ಇತ್ತೀಚಿಗೆ ಹೊರಡಿಸಿದ್ದ ಅಧಿಸೂಚನೆ ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಬಿಜೆಪಿ ಒತ್ತಾಯಿಸಿತ್ತು. ಬಿಜೆಪಿ ಇಂತಹ ಒತ್ತಾಯ ಮಾಡಿದ ಗಂಟೆಯೊಳಗೆ ಸಹಾನಿ ಅವರನ್ನು ಸಂಪುಟದಿಂದ ಕಿತ್ತುಹಾಕುವಂತೆ ನಿತೀಶ್ ಕುಮಾರ್ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಬಿಜೆಪಿ ವಕ್ತಾರ ಅರವಿಂದ್ ಕುಮಾರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ, ಮೀನುಗಾರಿಕಾ ಸಚಿವರು ಮಚುರಾ ಸಮುದಾಯವನ್ನು ತೀವ್ರವಾಗಿ ಕೆರಳಿಸುವ ಅಧಿಸೂಚನೆ ಹೊರ ತಂದಿದ್ದಾರೆ ಎಂದು ಹರಿಹಾಯ್ದಿದ್ದರು.
ಸಹಾನಿ ಹಾಗೂ ಅವರ ವಿಐಪಿ ಬಿಹಾರದಲ್ಲಿ ಎನ್‍ಡಿಎ ಭಾಗವಾಗಿ ಉಳಿದಿಲ್ಲ. ಬಿಜೆಪಿ ಕೋಟಾದಿಂದ ಸಹಾನಿಯವರನ್ನು ಸಚಿವರಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಸಹಾನಿ ಎನ್‍ಡಿಎ ಕೂಟದಲ್ಲಿ ಇಲ್ಲದ ಕಾರಣ ತಕ್ಷಣ ಅವರನ್ನು ಸಂಪುಟ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ತನ್ನ ಪತ್ರದಲ್ಲಿ ಒತ್ತಾಯಿಸಿತ್ತು. ಬಿಹಾರದ ಎನ್‍ಡಿಎ ಮೈತ್ರಿಕೂಟದ ಐದು ಪಕ್ಷಗಳಲ್ಲಿ ವಿಐಪಿ ಕೂಡಾ ಒಂದು.
ಬಿಜೆಪಿಯ ಇತರ ಮಿತ್ರಪಕ್ಷಗಳೆಂದರೆ ಜೆಡಿಯು, ಎಚ್‍ಎಎಂಎಸ್ ಹಾಗೂ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ. ಇದಕ್ಕೂ ಮುನ್ನ ಕಳೆದ ಬುಧವಾರ ಸಹಾನಿ ನೇತೃತ್ವದ ವಿಐಪಿ ಪಕ್ಷದ ಮೂವರು ಶಾಸಕರಾದ ರಾಜು ಸಿಂಗ್, ಮಿಶ್ರಿ ಲಾಲ್ ಯಾದವ್ ಮತ್ತು ಸ್ವರ್ಣ ಸಿಂಗ್ ಅವರು ಬಿಜೆಪಿ ಸೇರಿದ್ದರು. ಸಹಾನಿ ಸ್ವತಃ ಸೋತರೂ ಸಹ ಅವರ ಪಕ್ಷವು ನಾಲ್ಕು ಸ್ಥಾನಗಳನ್ನು ಗೆದ್ದಿತು. ಆದರೆ ಒಬಿಸಿ ಮತಗಳ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಅವರಿಗೆ ಸಚಿವ ಸ್ಥಾನ ನೀಡಿತ್ತು.
ಇದನ್ನು ಓದಿ:ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿಯ ಮುಸ್ಲಿಂ ಮತಗಳು ಎಸ್ಪಿಗೆ ಶಿಫ್ಟ್ ಆಗಿವೆ: ಮಾಯಾವತಿ