ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ ಜನರ ಜೀವನ ಮತ್ತು ಜೀವನೋಪಾಯಗಳನ್ನು ನಾವು ರಕ್ಷಿಸಬೇಕಾಗಿದೆ ಎಂದು ಪ್ರಧಾನನಮಂತ್ರಿ ನರೇಂದ್ರ ಮೋದಿ ಈ ಹಿಂದೆ ಘೋಷಿಸಿದ್ದರು. ರಾಷ್ಟ್ರೀಯ ಲಾಕ್‌ಡೌನ್‌ಗೆ ಬದಲಾಗಿ, ಕೇವಲ ರಾಜ್ಯ ಮಟ್ಟದ ನಿರ್ಬಂಧಗಳು ಮತ್ತು ಲಾಕ್‌ಡೌನ್‌ಗಳನ್ನು ವಿಧಿಸಲಾಗಿದೆ. ಈ ಬಗ್ಗೆ ಹೆಸರಾಂತ ಆರ್ಥಿಕತಜ್ಞ ಜೀನ್ ಡ್ರೆಜ್ ಎಚ್ಚರಿಕೆ ನೀಡಿದ್ದಾರೆ. ಇಂತಹ ಕ್ರಮಗಳಿಂದಾಗಿ ಹೆಚ್ಚು ಗಂಭೀರವಾದ ಜೀವನೋಪಾಯದ ಬಿಕ್ಕಟ್ಟು ಇಡೀ ದೇಶವನ್ನು ಆವರಿಸಿಕೊಳ್ಳುವ ಅಪಾಯ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ದೈನಂದಿನ ಕೂಲಿಯೊಂದೇ ದೇಶದ ಕೋಟ್ಯಂತರ ಜನರಿಗೆ ಏಕಮಾತ್ರ ಜೀವನೋಪಾಯದ ಮೂಲವಾಗಿದೆ. ಇಂತಹ ಅಸಂಘಟಿತ ವಲಯದ 45 ಕೋಟಿ ಕಾರ್ಮಿಕರಲ್ಲಿ ಹೆಚ್ಚಿನವರು ತೀವ್ರ ಬಡತನದಿಂದ ನರಳುತ್ತಿದ್ದು, ಕೋವಿಡ್‌ನಿಂದಾಗಿ ಉಂಟಾಗುತ್ತಿರುವ ಸಾವುಗಳಿಗಿಂತ ಹಸಿವಿನಿಂದ ಮರಣ ಹೊಂದುತ್ತಿರುವ ಇಂತಹ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದರು.
ಜನರು ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದ ಕ್ರಮವೇನೋ ಎಂಬಂತೆ ದೇಶದ 80 ಕೋಟಿ ಜನರಿಗೆ ತಲಾ 5 ಕೆ.ಜಿ. ಆಹಾರ ಧಾನ್ಯಗಳನ್ನು ಪೂರೈಸುವುದಾಗಿ ಕೇಂದ್ರ ಸರಕಾರ ಮೇ ಮತ್ತು ಜೂನ್ ತಿಂಗಳಲ್ಲಿ ಘೋಷಿಸಿತ್ತು. ಆದಾಗ್ಯೂ, ಜನಗಣತಿಯಲ್ಲಿ ತಮ್ಮ ವಿವರಗಳನ್ನು ದಾಖಲಿಸಿರದ ಕಾರಣದಿಂದಾಗಿ 10 ಕೋಟಿಗೂ ಹೆಚ್ಚು ಬಡವರು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಧಾನ್ಯಗಳನ್ನು ಪಡೆಯುವುದು ಈಗ ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಬೇಕಿದೆ. ಇನ್ನು ಕೆಲವರ ಬೆರಳು ಮುದ್ರೆಗಳು ಕಾಲಾನಂತರದಲ್ಲಿ ಅಳಿಸಿಹೋಗಿವೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂತಹ ಫಲಾನುಭವಿಗಳ ಬೆರಳಿನ ಗುರುತುಗಳನ್ನು ಬಯೋಮೆಟ್ರಿಕ್ ಯಂತ್ರಗಳು ಗುರುತಿಸಲಾಗದ ಕಾರಣ ಸಬ್ಸಿಡಿ ಧಾನ್ಯಗಳ ಪಾಲನ್ನು ಪಡೆಯಲು ಅವರಿಗೆ ಸಾಧ್ಯವಾಗದು ಎಂದು ತಿಳಿಸಿದರು.
ಒಂದೆಡೆ ಬಡವರಿಗೆ ಹೆಚ್ಚುವರಿ ಪ್ರಮಾಣದ ಆಹಾರ ಧಾನ್ಯಗಳನ್ನು ವಿತರಿಸುವ ಭರವಸೆ ನೀಡುತ್ತಿರುವ ಕೇಂದ್ರ ಸರಕಾರವು ಇನ್ನೊಂದೆಡೆ ವಲಸೆ ಕಾರ್ಮಿಕರಿಗೆ ಅಂತಹ ಯಾವುದೇ ಪರಿಹಾರವನ್ನು ನೀಡಲು ನಿರಾಕರಿಸುತ್ತಿದೆ. ಇದಕ್ಕೆ ಅದು ನೀಡುವ ಕಾರಣವೆಂದರೆ, ಲಾಕ್ ಔಟ್ ಕ್ರಮವನ್ನು ದೇಶಾದ್ಯಂತ ಜಾರಿಗೊಳಿಸಿಲ್ಲ ಎಂಬುದೇ ಆಗಿದೆ. ಹೀಗಾಗಿ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹಿಂತಿರುಗಬಹುದು ಹಾಗೂ ತಮ್ಮ ಪಡಿತರ ಚೀಟಿಗಳ ಸಹಾಯದಿಂದ ಆಹಾರ ಧಾನ್ಯಗಳನ್ನು ಪಡೆಯಲು ಅವರಿಗೆ ಸಾಧ್ಯವಿದೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ.
ಜಿಡಿಪಿಗೆ ಶೇಕಡಾ 10ರಷ್ಟು ಕೊಡುಗೆ ನೀಡುವ ವಲಸೆ ಕಾರ್ಮಿಕರ ಬಗ್ಗೆ ಸರ್ಕಾರಗಳು ಕಿಂಚಿತ್ತೂ ಗಮನ ಕೊಡುತ್ತಿಲ್ಲ ಎಂಬುದು ಉಲ್ಲೇಖಾರ್ಹ ಸಂಗತಿ. ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ನಂತರ ಶೇಕಡಾ 39ಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಿದಾಗ ಅವರಿಗೆ ಉದ್ಯೋಗ ಸಿಗಲಿಲ್ಲ. ಲಾಕ್‌ಡೌನ್ ಪ್ರಭಾವದಿಂದಾಗಿ ಅವರ ಆದಾಯವು ಶೇಕಡಾ 86ರಷ್ಟು ಕುಸಿದಿದೆ. ತಮ್ಮ ಊರುಗಳಿಗೆ ಹಿಂದಿರುಗಲು ವಲಸೆ ಕಾರ್ಮಿಕರು ಕಳೆದ ವರ್ಷ ಎದುರಿಸಿದಂಥವೇ ಸಮಸ್ಯೆಗಳನ್ನು ಈ ವರ್ಷ ಕೂಡಾ ಎದುರಿಸುತ್ತಿದ್ದಾರೆ. ಆ ಕಷ್ಟಗಳಿಂದ ವಲಸೆ ಕಾರ್ಮಿಕರನ್ನು ರಕ್ಷಿಸಲು ಸರ್ಕಾರಗಳು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಂತೆ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.
ಭಾರತವು ವರ್ಷದಿಂದ ವರ್ಷಕ್ಕೆ ಕೃಷಿ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದ ಇಳುವರಿಯನ್ನು ಸಾಧಿಸುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ 107 ದೇಶಗಳನ್ನು ಒಳಗೊಂಡ ವಿಶ್ವ ಹಸಿವು ಸೂಚ್ಯಂಕದಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ಎಲ್ಲಾ ಉದ್ಯೋಗಾವಕಾಶಗಳನ್ನು ಕೋವಿಡ್ ನುಂಗಿ ಹಾಕಿದ್ದು, ವಲಸೆ ಕಾರ್ಮಿಕರ ಜೀವಿಸುವ ಹಕ್ಕೇ ದುರ್ಬಲಗೊಂಡುಬಿಟ್ಟಿದೆ. ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಆದೇಶಗಳಲ್ಲಿ ವಲಸೆ ಕಾರ್ಮಿಕರಿಗೆ ದಿನಸಿ ಜೊತೆಗೆ ದಿನಕ್ಕೆ ಎರಡು ಊಟವನ್ನು ಒದಗಿಸುವಂತೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಸರ್ಕಾರಗಳ ಜೊತೆಜೊತೆಗೆ ಕೇಂದ್ರ ಸರ್ಕಾರಕ್ಕೂ ನಿರ್ದೇಶನ ನೀಡಿದೆ. ವಲಸಿಗರು ಮನೆಗೆ ಮರಳಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಮಾಡಬೇಕೆಂದು ಸಹ ಅದು ಕರೆ ನೀಡಿತು. ಆ ಮೂಲಕ ದೇಶದ ಇತರ ಪ್ರದೇಶಗಳಲ್ಲಿನ ಕಾರ್ಮಿಕರಿಗೂ ಇದೇ ರೀತಿಯ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯವಾದಂತಾಗಿದೆ.
ಜೀವನೋಪಾಯದ ನಷ್ಟದಿಂದಾಗಿ ಬಡತನಕ್ಕೆ ಜಾರಿದ ಕುಟುಂಬಗಳು ಸಹ ಹಸಿವಿನ ನೋವನ್ನು ಅನುಭವಿಸುತ್ತಿವೆ. ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಯನದ ವರದಿಗಳ ಪ್ರಕಾರ, ಸಾಂಕ್ರಾಮಿಕ ರೋಗದಿಂದ ಉಂಟಾದ ಹಾನಿಯಿಂದಾಗಿ 23 ಕೋಟಿ ಭಾರತೀಯರ ದೈನಂದಿನ ಆದಾಯ ಮತ್ತು ದೈನಂದಿನ ಕನಿಷ್ಠ ವೇತನ 375 ರೂ.ಗಿಂತ ಕಡಿಮೆಯಾಗಿದೆ. ಈಗ ಕೋಟ್ಯಂತರ ಜನರಿಗೆ ಕೆಲಸವೂ ಇಲ್ಲ, ಆಹಾರವೂ ಇಲ್ಲ.
ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಶೇಕಡಾ 27ರಷ್ಟು ಭಾರತೀಯರು ಯಾವುದೇ ಆಹಾರದ ಲಭ್ಯತೆ ಇಲ್ಲದೇ ಆಗಾಗ ಹಸಿವಿನಿಂದ ಬಳಲಿದ್ದರು ಎಂದು ಆಹಾರ ಹಕ್ಕು ಅಭಿಯಾನವು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಇಂತಹ ಮಾನವ ದುರಂತ ಮತ್ತೆ ಎಂದಿಗೂ ಮರುಕಳಿಸಬಾರದು. ದೇಶದ ಸರ್ಕಾರಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳಿದ್ದು, ಅದರ ಪ್ರಮಾಣವು ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವ ಪ್ರಮಾಣಕ್ಕಿಂತ 3 ಪಟ್ಟು ಹೆಚ್ಚಾಗಿದೆ. ಬಡವರಾಗಿರಲಿ ಅಥವಾ ಮಧ್ಯಮ ವರ್ಗಕ್ಕೆ ಸೇರಿದವರಾಗಿರಲಿ, ಅಗತ್ಯವಿರುವ ಎಲ್ಲರಿಗೂ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಸಮಯ ಈಗ ಬಂದಿದೆ. ಹಸಿವಿನಿಂದ ಉಂಟಾಗುವ ಸಾವುಗಳನ್ನು ತಪ್ಪಿಸಲು ಸರಕಾರಗಳು ಈಗ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಸಲಹೆ ನೀಡಿದರು.