ಚಮೋಲಿ (ಉತ್ತರಾಖಂಡ) : ಇಲ್ಲಿನ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದಲ್ಲಿ ಸೋಮವಾರ ಹಿಮಪಾತವಾಗಿದೆ. ಮಲಾರಿ ಗ್ರಾಮದಲ್ಲಿ ಹಿಮಪಾತದ ತೀವ್ರ ಹೆಚ್ಚಿತ್ತು. ಆದರೆ, ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಬೃಹದಾಕಾರದ ಹಿಮಗಡ್ಡೆಯು ನೇರವಾಗಿ ಕುಂತಿ ಕಣಿವೆಗೆ ಜಾರಿದೆ. ಈ ಕುಂತಿ ಕಣಿವೆ ಭಾರತ-ಚೀನಾ ಗಡಿ ರಸ್ತೆಯಲ್ಲಿದೆ.
ಹಿಮಾಲಯದ ತಪ್ಪಲಿನಲ್ಲಿ ಹಿಮಕುಸಿತ ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಮಲಾರಿ ಗ್ರಾಮದಲ್ಲಿ ಹಿಮಕುಸಿತವಾಗಿದೆ. ಇದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಚಮೋಲಿ ಪ್ರದೇಶದಲ್ಲಿ ಶೀತ ವಾತಾವರಣವಿದೆ. ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮ ಸುರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಚಮೋಲಿಯಲ್ಲಿರುವ ಬದರಿನಾಥ್ ಧಾಮ್, ಹೇಮಕುಂಡ್ ಸಾಹಿಬ್, ಔಲಿ, ದಿವಾಲಿಖಾಲ್ ಮಂಡಲ್ ಪ್ರದೇಶದಲ್ಲಿ ಹಿಮಪಾತವಾಗಿದೆ.
ಮತ್ತೊಂದೆಡೆ, ರುದ್ರಪ್ರಯಾಗದಲ್ಲಿ ಭಾನುವಾರ ತಡರಾತ್ರಿಯಿಂದಲೇ ಹಿಮ ಸುರಿಯುತ್ತಿತ್ತು. ಹೀಗಾಗಿ, ಜನಜೀವನಕ್ಕೆ ತೊಂದರೆಯಾಗಿದೆ. ನಿರಂತರ ಹಿಮ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತೊಂದರೆಯಾಗಿದೆ. ಈ ಮಳೆ ಬೆಳೆಗಳಿಗೆ ಉತ್ತಮವೆಂದು ರೈತರು ಹೇಳುತ್ತಿದ್ದಾರೆ. ಮಳೆ ಮತ್ತು ಹಿಮಪಾತದಿಂದ ರುದ್ರಪ್ರಯಾಗದಲ್ಲಿ ಚಳಿ ಹೆಚ್ಚಾಗಿದೆ.
ಕೇದಾರನಾಥದಲ್ಲಿ ಹಿಮರಾಶಿ: ಹಿಮಾಲಯ ಪ್ರದೇಶಗಳಲ್ಲಿ ನಿರಂತರವಾದ ಆಗುತ್ತಿರುವ ಹಿಮಪಾತದಿಂದ ಕೇದಾರನಾಥದಲ್ಲಿ ಆರು ಅಡಿಯಷ್ಟು ಹಿಮ ಶೇಖರಣೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಕೇದಾರನಾಥ ದೇವಾಲಯದ ಪುನರ್‌ನಿರ್ಮಾಣ ಕೆಲಸವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಭಾರತ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಕೇದಾರನಾಥ ದೇಗುಲದ ಭದ್ರತೆಯಲ್ಲಿದ್ದಾರೆ. ಋಷಿಮುನಿಗಳು, ಸಾಧು ಸಂತರು ಕೊರೆಯುವ ಚಳಿಯಲ್ಲಿ ಕೇದಾರನಾಥನ ತಪಸ್ಸು ಮಾಡುತ್ತಿದ್ದ ದೃಶ್ಯವೂ ಕಾಣಿಸಿತು.
ಜಮ್ಮು ಕಾಶ್ಮೀರದಲ್ಲಿ ಹಿಮಪಾತ ಮುಂದೆವರೆದಿದೆ. ಮುಂದಿನ 24 ಗಂಟೆಗಳ ಕಾಲ ಎಚ್ಚರದಿಂದಿರಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಧಿಕಾರ ಸುತ್ತೋಲೆ ಹೊರಡಿಸಿದ್ದು, ಜಮ್ಮು ಪ್ರಾಂತ್ಯದ ಅನಂತ್ನಾಗ್, ಬಂಡಿಪೋರಾ, ಬಾರಮುಲ್ಲಾ, ಗಂದರ್ಬಲ್, ಕುಲ್ಗಾಮ್, ಕುಪ್ವಾರ್ ಮತ್ತು ದೋಡಾ ಮತ್ತು ಕಿಶ್ತ್ವಾರ್ ಪದೇಶಗಳಲ್ಲಿ ಭಾರಿ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕಾಶ್ಮೀರದಲ್ಲಿ ಭಾನುವಾರ ಸಂಜೆಯಿಂದ ಹಿಮಪಾತವಾಗುತ್ತಿದ್ದು, ಶೀತ ಅಲೆ ಇದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಹನ್ನೆರಡು ಗಂಟೆಗಳಲ್ಲಿ ಇನ್ನೂ ಹೆಚ್ಚಿನ ಹಿಮಪಾತವಾಗಲಿದೆ.
ಹಿಮಪಾತಕ್ಕೆ ಇಬ್ಬರು ಬಲಿ: ಕೇಂದ್ರಾಡಳಿತ ಪ್ರದೇಶ ಲಡಾಖ್ನ ಕಾರ್ಗಿಲ್ನಲ್ಲಿ ಹಿಮಪಾತದಡಿ ಸಿಲುಕಿ ಬಾಲಕಿ ಮತ್ತು ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಘಟನೆ ನಡೆದಿದೆ. ಕುಯ್ಸುಮ್ (11) ಮತ್ತು ಬಿಲ್ಕಿಸ್ (23) ಎಂಬುವವರು ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳೀಯರ ನೆರವಿನಿಂದ ಕಾರ್ಯಚರಣೆ ನಡೆಸಿ ಮೃತದೇಹವನ್ನು ಹಿಮದಿಂದ ಹೊರತೆಗೆದಿದ್ದಾರೆ.
ಇದನ್ನೂ ಓದಿ: ಭಗವಾನ್ ಶ್ರೀರಾಮ ಸೀತಾದೇವಿ ಮೂರ್ತಿ ಕೆತ್ತನೆಗೆ ನೇಪಾಳದಿಂದ ಶಾಲಿಗ್ರಾಮ ಕಲ್ಲು ರವಾನೆ