ಚಂಡೀಗಢ: ಪಂಜಾಬ್ ಸಶಸ್ತ್ರ ಪೊಲೀಸ್ (ಪಿಎಪಿ) ಇಲಾಖೆಯ ಉಪ ಅಧೀಕ್ಷಕ (ಡಿಎಸ್ಪಿ)ಯಾಗಿದ್ದ ಅರ್ಜುನ ಪ್ರಶಸ್ತಿ ಪುರಸ್ಕೃತ ವೇಟ್‌ಲಿಫ್ಟರ್ ದಲ್ಬೀರ್ ಸಿಂಗ್ ಅವರನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನಾಲ್ಕು ದಿನಗಳ ಹಿಂದೆ ಜಲಂಧರ್‌ನಲ್ಲಿ ದಲ್ಬೀರ್ ಸಿಂಗ್ ಶವವಾಗಿ ಪತ್ತೆಯಾಗಿದ್ದರು. ಇದೀಗ ಇವರನ್ನು ಕೊಲೆ ಮಾಡಿರುವ ಮಾಹಿತಿ ಹೊರಬಿದ್ದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೋರ್ವವನ್ನು ಪೊಲೀಸರು ಬಂಧಿಸಿದ್ದಾರೆ.
ವೇಟ್‌ಲಿಫ್ಟರ್ ಆಗಿದ್ದ 54 ವರ್ಷದ ದಲ್ಬೀರ್ ಸಿಂಗ್ 2000ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಸದ್ಯ ಪಂಜಾಬ್ ಸಶಸ್ತ್ರ ಪೊಲೀಸ್ (ಪಿಎಪಿ) ಇಲಾಖೆಯಲ್ಲಿ ಡಿಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಜಲಂಧರ್‌ನ ಬಸ್ತಿ ಬಾವಾ ಖೇಲ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸೋಮವಾರ ರಸ್ತೆಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಅವರ ದೇಹದ ಮೇಲೆ ಗಾಯದ ಗುರುತುಗಳು ಇರುವುದೂ ಸಹ ಕಂಡುಬಂದಿತ್ತು.
ಜಗಳ ಕೊಲೆಯಲ್ಲಿ ಅಂತ್ಯ: ದಲ್ಬೀರ್ ಸಿಂಗ್ ಶವವಾಗಿ ಪತ್ತೆಯಾದ ನಾಲ್ಕು ದಿನಗಳ ಅವರನ್ನು ಕೊಲೆ ಮಾಡಿರುವುದು ಬಯಲಾಗಿದೆ. ಈ ಘಟನೆಯ ದಿನ ದಲ್ಬೀರ್ ಸಿಂಗ್ ಹಾಗೂ ಆರೋಪಿಗಳು ಜಗಳ ನಡೆದಿದೆ. ಬಳಿಕ ಅಧಿಕಾರಿಯ ಸರ್ವೀಸ್ ಪಿಸ್ತೂಲ್‌ನಿಂದಲೇ ಹಂತಕರು ಕೊಲೆ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿ ಆಟೋ ಚಾಲಕನನ್ನು ವಿಜಯ್ ಕುಮಾರ್ ಎಂಬುವುದಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಪತ್ತೆ: ಈ ಕುರಿತು ಜಲಂಧರ್ ಪೊಲೀಸ್ ಆಯುಕ್ತ ಸ್ವಪನ್ ಶರ್ಮಾ ಗುರುವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ್ದು, ಹೊಸ ವರ್ಷದ ಮುನ್ನಾ ದಿನವಾದ ಡಿಸೆಂಬರ್ 31ರ ರಾತ್ರಿ ಡಿಎಸ್ಪಿ ದಲ್ಬೀರ್ ಸಿಂಗ್ ಅವರು ಆಟೋ ಚಾಲಕ ವಿಜಯ್ ಕುಮಾರ್ಗೆ ತಮ್ಮ ಕಪುರ್ತಲಾದ ಗ್ರಾಮ ಖೋಜೆವಾಲ್‌ಗೆ ಡ್ರಾಪ್ ಮಾಡುವಂತೆ ಕೇಳಿದ್ದರು. ಮಾದಕ ವ್ಯಸನಿಯಾಗಿದ್ದ ಆರೋಪಿ ಅಷ್ಟು ದೂರ ಹೋಗಲು ನಿರಾಕರಿಸಿದ್ದರು. ಇದೇ ವಿಷಯವಾಗಿ ಗಲಾಟೆ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ಆರೋಪಿ ಡಿಎಸ್‌ಪಿಯವರ ಸರ್ವೀಸ್ ಪಿಸ್ತೂಲ್‌ನಿಂದಲೇ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವಿವರಿಸಿದರು.
ಪಿಸ್ತೂಲ್ - ಗುಂಡುಗಳು ವಶ: ಮತ್ತೊಂದೆಡೆ, ದಲ್ಬೀರ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಬಲಗಣ್ಣಿಗೆ ಮತ್ತು ತಲೆಬುರುಡೆಗೆ ಗುಂಡಿನ ಗಾಯಗಳಾಗಿದ್ದು ಬಹಿರಂಗವಾಗಿತ್ತು. ಬಳಿಕ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಜಲಂಧರ್ ನಿವಾಸಿಯಾಗಿದ್ದು, ಬಂಧಿತನಿಂದ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಇದನ್ನೂ ಓದಿ: ಕರ್ತವ್ಯದ ವೇಳೆ ಬಿಜೆಪಿ ಸೇರಿದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು