ಕೋಯಿಕ್ಕೋಡ್ (ಕೇರಳ): ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ದುರ್ಘಟನೆಯೊಂದು ನಡೆದಿದೆ. ಬೀದಿ ನಾಯಿಯೊಂದು ರಸ್ತೆಗೆ ಏಕಾಏಕಿ ನುಗ್ಗಿದ ಪರಿಣಾಮ ಆಟೋ ರಿಕ್ಷಾ ಪಲ್ಟಿ ಹೊಡೆದಿದೆ. ಇದರಿಂದ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರನ್ನು ಅನಿಲ್ ಬಾಬು (44) ಎಂದು ಗುರುತಿಸಲಾಗಿದೆ.
ಇಲ್ಲಿನ ಕನ್ನೂಕ್ಕರ-ಒಂಚಿಯಂ ರಸ್ತೆಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಅನಿಲ್ ಬಾಬು ತಮ್ಮ ಆಟೋ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದರು. ಇಲ್ಲಿನ ಬಸ್ ನಿಲ್ದಾಣದಿಂದ ಹಾದು ಹೋಗುವಾಗ ರಸ್ತೆ ಬೀದಿ ನಾಯಿ ಅಡ್ಡ ಓಡಿ ಬಂದಿದೆ. ಇದರ ಪರಿಣಾಮ ಆಟೋ ಪಲ್ಟಿ ಹೊಡೆದಿದೆ. ಈ ಘಟನೆಯಲ್ಲಿ ಚಾಲಕ ಅನಿಲ್ ಬಾಬು ಗಂಭೀರವಾಗಿ ಗಾಯಗೊಂಡಿದ್ದರು. ಆಗ ಈ ಭೀಕರ ಅಪಘಾತವನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಅನಿಲ್ ಬಾಬು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ 3 ತಿಂಗಳ ಮಗುವನ್ನು ಕಚ್ಚಿ ಕೊಂದ ಬೀದಿನಾಯಿ!
ಗಂಭೀರವಾಗಿ ಗಾಯಗೊಂಡಿದ್ದ ಅನಿಲ್ ಬಾಬು ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದೆ.
ಈ ಹಿಂದೆ ಎರ್ನಾಕುಲಂ ಜಿಲ್ಲೆಯಲ್ಲೂ ಇಂತಹದ್ದೆ ಘಟನೆ ನಡೆದಿತ್ತು. ಚೇರನಲ್ಲೂರ್ ಕೊತಾಡು ಎಂಬಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಬಳಿಕ ಬೈಕ್ ಸವಾರ ಮೃತಪಟ್ಟಿದ್ದ. ದೂಮ್ಲಪಲ್ಲಿ ಮೂಲದ 26 ವರ್ಷದ ಸಲ್ತಾನ್ ಎಂಬ ಯುವಕ ಬೈಕ್ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ನಾಯಿ ಅಡ್ಡಿ ಬಂದಿತ್ತು. ಇದರಿಂದ ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದ ಆತ ಲಾರಿಯ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದ. ಈ ಘಟನೆ ಬಗ್ಗೆ ವರಪುಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಾಯಿಗಳ ದಾಳಿಯಿಂದ ಬಾಲಕ ಸಾವು: ಕಣ್ಣೂರು ಜಿಲ್ಲೆಯಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಜೂನ್ 11 ರಂದು ಕಣ್ಣೂರು ಜಿಲ್ಲೆಯ ಮುಜುಪಿಲಂಗಾಡ್‌ನಲ್ಲಿ ಬೀದಿ ನಾಯಿಗಳ ದಾಳಿಯಿಂದ 11 ವರ್ಷದ ನಿಹಾಲ್ ಎಂಬ ವಿಕಲಚೇತನ ಬಾಲಕ ಸಾವಿಗೀಡಾಗಿದ್ದ. ಅಂದು ಸಂಜೆ ಮನೆಯಿಂದ ಹೊರ ಹೋಗಿದ್ದ ನಿಹಾಲ್ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.
ಹೀಗಾಗಿ ಆತನಿಗಾಗಿ ಮನೆಯವರು ಮತ್ತು ನೆರೆಹೊರೆಯವರು ಹುಡುಕಾಟ ಆರಂಭಿಸಿದ್ರು. ಆಗ ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಸ್ವಲ್ವ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈ ಸಂದರ್ಭದಲ್ಲಿ ಬಾಲಕ ನಿಹಾಲ್ ದೇಹದಲ್ಲಿ ನಾಯಿಗಳ ಕಡಿತದ ಹಲವಾರು ಗಾಯಗಳು ಪತ್ತೆಯಾಗಿದ್ದವು. ಕೂಡಲೇ ಬಾಲಕನ್ನು ಆಸ್ಪತ್ರೆಗೆ ಸಾಗಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: Dog Attack: ಬೀದಿ ನಾಯಿಗಳ ದಾಳಿಗೆ 10 ವರ್ಷದ ಮೂಗ ಬಾಲಕ ಬಲಿ!