ಆಗ್ರಾ: ಆಟೋ ಚಾಲಕನ ಪತ್ನಿ ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಅಲ್ಟ್ರಾಸೌಂಡ್ ಪರೀಕ್ಷೆಯ ಸಮಯದಲ್ಲಿ ಅವಳಿಗಳ ಬಗ್ಗೆ ಮಾತ್ರ ತಿಳಿದುಕೊಂಡಿದ್ದರು. ತಾಯಿ ಹಾಗು ಮೂವರು ಹೆಣ್ಣು ಮತ್ತು ಒಬ್ಬ ಗಂಡು ಮಗು ಆರೋಗ್ಯವಾಗಿದ್ದಾರೆ.
ಎತ್ಮದ್ದೌಲಾ ಪ್ರದೇಶದ ಪ್ರಕಾಶ್ ನಗರದ ನಿವಾಸಿ ಖುಷ್ಬೂ ಇಷ್ಟು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಇವರ ಪತಿ ಮನೋಜ್ ವೃತ್ತಿಯಲ್ಲಿ ಆಟೋ ಚಾಲಕ. ಭಾನುವಾರ ಬೆಳಗ್ಗೆ ಹೆರಿಗೆಗಾಗಿ ಟ್ರಾನ್ಸ್ ಯಮುನಾ ಕಾಲೋನಿ ಹಂತ-1ರಲ್ಲಿರುವ ಅಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒಂದೇ ಸಮಯದಲ್ಲಿ ನಾಲ್ಕು ಮಕ್ಕಳ ತಂದೆಯಾದ ಆಟೋ ಚಾಲಕನಿಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದಾರೆ. ಈಗ ಕುಟುಂಬಕ್ಕೆ ನಾಲ್ವರು ಮಕ್ಕಳು ಸೇರ್ಪಡೆಯಾಗಿದ್ದು, ಮಕ್ಕಳನ್ನು ವಿಶೇಷ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.
ಆಸ್ಪತ್ರೆಯ ನಿರ್ವಾಹಕ ಮಹೇಶ್ ಚೌಧರಿ ಮಾತನಾಡಿ, "ಹಲವು ವರ್ಷಗಳಿಂದ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದೇನೆ. ಆದರೆ, ಇಂತಹ ಪವಾಡ ನೋಡಿಲ್ಲ" ಎಂದು ಅಚ್ಚರಿ ವ್ಯಕ್ತಪಡಿಸಿದರು. ಇದೇ ವೇಳೆ, "ಕುಟುಂಬಕ್ಕೆ ಆರ್ಥಿಕ ಸಹಾಯದ ಅಗತ್ಯವಿದ್ದರೆ ನೀಡಲು ನಾವು ಸಿದ್ಧರಿದ್ದೇವೆ. ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡುತ್ತೇವೆ" ಎಂದು ಭರವಸೆ ಕೊಟ್ಟರು.
ಇದನ್ನೂ ಓದಿ: ಅಧ್ಯಕ್ಷೀಯ ಚುನಾವಣೆಯಲ್ಲಿ ಯಶವಂತ್ ಸಿನ್ಹಾ ಅವರಿಗೆ ನಮ್ಮ ಮತ : ಒವೈಸಿ