ಕೋಲ್ಕತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅಕಾಡೆಮಿಯಿಂದ ನೀಡಲಾದ 'ಹೊಸ ವಿಶೇಷ ಪ್ರಶಸ್ತಿ'ಗೆ ವಿರೋಧ ವ್ಯಕ್ತವಾಗಿದೆ. ಬಂಗಾಳಿ ಲೇಖಕಿ ಮತ್ತು ಜಾನಪದ ಸಂಶೋಧಕರಾದ ರತ್ನಾ ರಶೀದ್ ಬ್ಯಾನರ್ಜಿ ಅವರು ತಮಗೆ ಅಕಾಡೆಮಿ ನೀಡಿದ ‘ಅನ್ನದ ಶಂಕರ್ ಸ್ಮಾರಕ ಸಮ್ಮಾನ್’ ಅನ್ನು ಹಿಂದಿರುಗಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿ ವಿಶೇಷ ಪ್ರಶಸ್ತಿಯನ್ನು ನೀಡಿದೆ. ಇದು ಸಾಹಿತ್ಯ ವಲಯದ ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಲೇಖಕಿ ರತ್ನಾ ರಶೀದ್ ಬ್ಯಾನರ್ಜಿ ಅವರು ತಮಗೆ 2019 ರಲ್ಲಿ ಅಕಾಡೆಮಿಯಿಂದ ಕೊಡಮಾಡಲಾದ ‘ಅನ್ನದ ಶಂಕರ್ ಸ್ಮಾರಕ ಸಮ್ಮಾನ್’ ಗೌರವವನ್ನು ಹಿಂದಿರುಗಿಸುವೆ. ಇದೊಂದು 'ಅವಮಾನಕರ ಸಂಗತಿ' ಎಂದು ಹೇಳಿದ್ದಾರೆ.
ಇದು ಅವಮಾನಕರ ಸಂಗತಿ: ಶಿಕ್ಷಣ ಸಚಿವರೂ ಆಗಿರುವ ಅಕಾಡೆಮಿ ಅಧ್ಯಕ್ಷೆ ಬ್ರತ್ಯಾ ಬಸು ಅವರಿಗೆ ಪತ್ರ ಬರೆದಿರುವ ರಶೀದ್ ಬ್ಯಾನರ್ಜಿ, ಜನ್ಮದಿನದಂದು ಸಿಎಂಗೆ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದ ನಿರ್ಧಾರದ ಹಿನ್ನೆಲೆಯಲ್ಲಿ ತಮಗೆ ನೀಡಲಾದ ಪ್ರಶಸ್ತಿಯು ಮುಳ್ಳಿನ ಕಿರೀಟವಾಗಿ ಪರಿಣಮಿಸಿದೆ. ಅಲ್ಲದೇ ಸಾಹಿತಿಗಳಿಗೆ ನೀವು ಮಾಡಿದ ಅವಮಾನವಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಪ್ರಶಸ್ತಿಯನ್ನು ಹಿಂದಿರುಗಿಸುವೆ ಎಂದು ಉಲ್ಲೇಖಿಸಿದ್ದಾರೆ.
ಸಿಎಂಗೆ ಸಾಹಿತ್ಯ ಪ್ರಶಸ್ತಿ ನೀಡುವ ಘೋಷಣೆ ಬರಹಗಾರ್ತಿಯಾಗಿ ನನಗೆ ಅವಮಾನವಾಗಿದೆ. ಇದೊಂದು ಕೆಟ್ಟ ನಿರ್ಧಾರ. ಸಿಎಂ ಮಮತಾ ಬ್ಯಾನರ್ಜಿ ಅವರ ಸಾಹಿತ್ಯವನ್ನು ಹೊಗಳಿರುವ ಅಕಾಡೆಮಿಯ ಹೇಳಿಕೆಯು ಹಾಸ್ಯದಂತಿದೆ ಎಂದು ರಶೀದ್ ಬ್ಯಾನರ್ಜಿ ಹೇಳಿದ್ದಾರೆ.
ಸೋಮವಾರದಂದು ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರ 2020 ರಲ್ಲಿ ಬಿಡುಗಡೆಯಾದ ಕವನ ಸಂಕಲನವಾದ ‘ಕಬಿತಾ ಬಿಟನ್’ ಪುಸ್ತಕಕ್ಕೆ ಈ ವರ್ಷ ಪರಿಚಯಿಸಲಾದ ಪ್ರಶಸ್ತಿಯನ್ನು ಘೋಷಿಸಿ, ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗಿದೆ.
ಓದಿ: ಅಕ್ರಮ ನಗದು ಪತ್ತೆ ಪ್ರಕರಣ: 2ನೇ ದಿನವೂ ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾದ IAS ಪೂಜಾ ಸಿಂಘಾಲ್