ಔರಂಗಾಬಾದ್ (ಮಹಾರಾಷ್ಟ್ರ): ಜ್ಞಾನವು ಎಂದಿಗೂ ವ್ಯರ್ಥವಾಗುವುದಿಲ್ಲ ಮತ್ತು ಜ್ಞಾನ, ಧೈರ್ಯ ಮತ್ತು ಸಂಕಲ್ಪದಿಂದ ಎಂತಹುದ್ದೇ ಕಷ್ಟಗಳಿಂದಲೂ ಹೊರಬರಲು ಸಾಧ್ಯ ಎಂಬುದನ್ನು ಮಹಾರಾಷ್ಟ್ರದ ವಕೀಲರೊಬ್ಬರು ಸಾಬೀತುಪಡಿಸಿದ್ದಾರೆ. ಅಪಘಾತದಲ್ಲಿ ತಮ್ಮ ದೇಹ ಶೇ.95ರಷ್ಟು ಸ್ವಾಧೀನ ಕಳೆದುಕೊಂಡು, ಹಾಸಿಗೆ ಹಿಡಿದಿದ್ದರೂ ಆನ್‌ಲೈನ್ ಪಾಠ ಮಾಡುತ್ತಿದ್ದಾರೆ ಈ ಛಲದಂಕ ಮಲ್ಲ.
ಔರಂಗಾಬಾದ್ನ ಪಿಸಾದೇವಿ ಪ್ರದೇಶದಲ್ಲಿ ವಾಸಿಸುವ ವಕೀಲ ಉದಯ್ ಚವ್ಹಾಣ್ ಎಂಬುವವರೇ ಸ್ವಾವಲಂಬಿ ಜೀವನವನ್ನು ಕಟ್ಟಿಕೊಂಡವರು. 2019ರ ಫೆಬ್ರವರಿಯಲ್ಲಿ ಕುಟುಂಬದೊಂದಿಗೆ ರಾಯಗಢಕ್ಕೆ ಪ್ರಯಾಣಿಸುತ್ತಿದ್ದಾಗ ಉದಯ್ ಚವ್ಹಾಣ್ ಅವರ ವಾಹನ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಪುಟ್ಟ ಮಗಳನ್ನು ಕಳೆದುಕೊಂಡಿದ್ದಲ್ಲದೇ ಕಾರಿನಲ್ಲಿದ್ದ ಕುಟುಂಬದವರೆಲ್ಲ ಗಾಯಗೊಂಡಿದ್ದರು.
ಅದರಲ್ಲೂ ಉದಯ್ ಚವ್ಹಾಣ್ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಬೆನ್ನುಮೂಳೆ ಮುರಿದಿದ್ದು, ಕೈ-ಕಾಲುಗಳು ಸಹ ಕೆಲಸ ಮಾಡದಂತಹ ಪರಿಸ್ಥಿತಿಗೆ ಬಂದು ಬಿಟ್ಟಿದೆ. ಪ್ರತಿಯೊಂದಕ್ಕೂ ಇತರರ ಮೇಲೆ ಅವಲಂಬಿತರಾಗುವ ಸ್ಥಿತಿಗೆ ತಲುಪಿ, ಕೇವಲ ಮಾತನಾಡಲು ಮಾತ್ರ ತಮ್ಮಿಂದ ಸಾಧ್ಯ ಎಂಬ ದುಃಸ್ಥಿತಿ ನಿರ್ಮಾಣವಾಯ್ತು.
ತಮ್ಮ ದೇಹದ ಎಲ್ಲ ಅಂಗಗಳು ಕಾರ್ಯ ಮಾಡುವುದನ್ನು ನಿಲ್ಲಿಸಿದಾಗ, ಮಾತಿನ ಶಕ್ತಿ ಮತ್ತು ಆಲೋಚನಾ ಶಕ್ತಿ ಮಾತ್ರ ಉದಯ್ ಚವ್ಹಾಣ್ ಅವರಲ್ಲಿ ಉಳಿದಿತ್ತು. ಈಗ ಅವರಲ್ಲಿರುವ ಜ್ಞಾನವೇ ಕುಟುಂಬದ ನಿರ್ವಹಣೆ ಹಾಗೂ ಕಷ್ಟದ ಪರಿಸ್ಥಿತಿಯಿಂದ ಹೊರ ಬರುವ ದಾರಿಯನ್ನು ಕಂಡುಕೊಳ್ಳಲು ಸಹಾಯ ಮಾಡಿದೆ.
ವೃತ್ತಿಯಲ್ಲಿ ವಕೀಲರಾದರೂ ಉದಯ್ ಚವ್ಹಾಣ್, ತಮ್ಮ ಜ್ಞಾನದ ಮೂಲಕ ಮಕ್ಕಳಿಗೆ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಈ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಆರಂಭದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳಿಕೊಟ್ಟರು. ಆದರೆ, ನಂತರ ಮಕ್ಕಳ ಪೋಷಕರೇ ಪಾಠ ಮಾಡುವುದಕ್ಕಾಗಿ ಹಣ ನೀಡಿದರು. ಅಲ್ಲಿಂದ ಉದಯ್ ಚವ್ಹಾಣ್ ಅವರ ಜೀವನದ ಹೊಸ ಪಯಣ ಶುರುವಾಗಿದೆ. ಸದ್ಯ ಸುಮಾರು 20 ವಿದ್ಯಾರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಪಾಠ ಕಲಿಯುತ್ತಿದ್ದಾರೆ.
ಉದಯ್ ಚವ್ಹಾಣ್ ಸ್ವಾವಲಂಬಿ ಜೀವನದ ಪ್ರಯತ್ನಕ್ಕೆ ಪತ್ನಿ ನಮ್ರತಾ ಕೂಡ ಸಾಥ್ ನೀಡಿದ್ದಾರೆ. ಈ ಹಿಂದೆ ಮನೆಯ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಮನೆಯಲ್ಲೇ ಬಟ್ಟೆ ಅಂಗಡಿಯನ್ನು ತೆರೆದಿದ್ದರು. ಆದರೆ, ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಅಂಗಡಿ ಮುಚ್ಚಲಾಗಿತ್ತು. ಈಗ ನಾಲ್ಕು ತಿಂಗಳ ಹಿಂದೆ ಪತ್ನಿ ಹೊಸ ಉದ್ಯಮ ಕೂಡ ಆರಂಭಿಸಿದ್ದಾರೆ. ಬಟ್ಟೆ ಅಂಗಡಿಯೊಂದಿಗೆ ಪಾನಿಪುರಿ, ದಾಬೇಲಿ ಮತ್ತು ಭೇಲ್ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಈ ಮೂಲಕ ನಮ್ರತಾ ಪತಿ ಉದಯ್ ಅವರ ಹೆಗಲಿಗೆ ಹೆಗಲುಕೊಟ್ಟು ನಿಂತಿದ್ದಾರೆ.
ಇದನ್ನೂ ಓದಿ: ವಿಡಿಯೋ: ಹಿಮರಾಶಿಯ ನಡುವೆ 18,000 ಅಡಿ ಎತ್ತರದಲ್ಲಿ ಯೋಗಾಭ್ಯಾಸ ಮಾಡಿದ ITBP ಅಧಿಕಾರಿ