ವಲ್ಸಾದ್(ಗುಜರಾತ್) : ಕಳೆದ ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು ಅಪಘಾತ ಸಂಭವಿಸಿ 9 ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಭಾರಿ ಅನಾಹುತ ತಪ್ಪಿದಂತಾಗಿದೆ. ಮುಂಬೈ-ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ದಕ್ಷಿಣ ಗುಜರಾತ್ನ ವಲ್ಸಾದ್ ಬಳಿ ಸಿಮೆಂಟ್ ಪಿಲ್ಲರ್ಗೆ ಡಿಕ್ಕಿ ಹೊಡೆದಿದೆ.
ಕೆಲ ದುಷ್ಕರ್ಮಿಗಳು ಸಿಮೆಂಟ್ ಪಿಲ್ಲರ್‌ನ ರೈಲ್ವೆ ಹಳಿ ಮೇಲೆ ಹಾಕಿರುವುದರಿಂದ ಈ ಘಟನೆ ನಡೆದಿದೆ. ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 7:10ರ ವೇಳೆಗೆ ಈ ಘಟನೆ ನಡೆದಿದೆ.
ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ರೈಲನ್ನು ಹಳಿ ತಪ್ಪಿಸುವ ಉದ್ದೇಶದಿಂದ ದುಷ್ಕರ್ಮಿಗಳು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಲೊಕೊ ಪೈಲಟ್ ಅತುಲ್ ತಕ್ಷಣವೇ ರೈಲ್ವೆ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿ: ಎಚ್ಚರ..! ಸಮುದಾಯಕ್ಕೆ ಹರಡಿದೆ ಕೋವಿಡ್ ರೂಪಾಂತರಿ ಒಮಿಕ್ರಾನ್ : ಅಧ್ಯಯನದಿಂದ ಬಹಿರಂಗ
ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ ಜೊತೆ ಮಾತನಾಡಿರುವ ಡಿವೈಎಸ್ಪಿ ಮನೋಜ್ ಚಾವ್ಡಾ, ಕೆಲ ದುಷ್ಕರ್ಮಿಗಳು ರೈಲ್ವೆ ಹಳಿ ಮೇಲೆ ಸಿಮೆಂಟ್ ಕಂಬ ಹಾಕಿದ್ದರಿಂದ ಈ ಘಟನೆ ನಡೆದಿದೆ.
ಆದರೆ, ರೈಲಿನ ವೇಗಕ್ಕೆ ಸಿಮೆಂಟ್ ಪಿಲ್ಲರ್ ಮುರಿದು ಹೋಗಿದ್ದು, ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನ ಬಿಡಲ್ಲ ಎಂದಿರುವ ಅವರು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.