ಸಾಂಗ್ಲಿ (ಮಹಾರಾಷ್ಟ್ರ): ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಜೆಸಿಬಿ ಸದ್ದು ಜೋರಾಗಿದೆ. ಇದೀಗ ಮಹಾರಾಷ್ಟ್ರದಲ್ಲೂ ಜೆಸಿಬಿ ಮುನ್ನೆಲೆಗೆ ಬಂದಿದೆ. ಆದರೆ, ಅದು ಕಳ್ಳತನದ ವಿಚಾರಕ್ಕೆ ಎಂಬುದು ವಿಶೇಷ. ಸಾಂಗ್ಲಿ ಜಿಲ್ಲೆಯಲ್ಲಿ ಕಳ್ಳರು ಎಟಿಎಂ ದೋಚಲು ಜೆಸಿಬಿಯನ್ನು ಬಳಕೆ ಮಾಡಿದ್ದಾರೆ. ಇದು ಜನರಿಗೆ ಗೊತ್ತಾಗಿ ಎಟಿಎಂ ಬಿಟ್ಟು ಜೆಸಿಬಿ ಸಮೇತ ಪರಾರಿಯಾಗಿದ್ದಾರೆ.
ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಅರಗ್ ಎಂಬಲ್ಲಿ ಈ ಘಟನೆ ನಡೆದಿದೆ. ರಾತ್ರಿ ವೇಳೆ ಎಟಿಎಂ ಹಣ ದೋಚಲು ಮುಂದಾದ ಕಳ್ಳರು ಜೆಸಿಬಿಯಿಂದ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದಾರೆ. ಯಂತ್ರವನ್ನು ಜೆಸಿಬಿಯಿಂದ ಎಳೆದಿದ್ದಾರೆ. ಈ ವೇಳೆ ಉಂಟಾದ ಜೋರಾದ ಸದ್ದಿನಿಂದ ಸುತ್ತಲಿನ ಗ್ರಾಮಸ್ಥರು ಎಚ್ಚರಗೊಂಡು ಕಿರುಚಾಡಿದಾಗ ಖದೀಮರು ಎಟಿಎಂ ಬಿಟ್ಟು ಜೆಸಿಬಿ ಸಮೇತ ಕಾಲ್ಕಿತ್ತರು.
ಗ್ರಾಮಸ್ಥರ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಕಳ್ಳರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಎಟಿಎಂ ದೋಚುತ್ತಿರುವ ಕೃತ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ರಾತ್ರಿ ಹೊತ್ತು ಬೊಗಳುತ್ತವೆ ಎಂದು 10 ನಾಯಿಗಳಿಗೆ ವಿಷವಿಕ್ಕಿ ಕೊಂದರು!