ವಿಶಾಖಪಟ್ಟಣಂ (ಆಂಧ್ರಪ್ರದೇಶ): ಬದಲಾದ ಜೀವನ ಶೈಲಿ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರಿದೆ. 30 ವರ್ಷ ವಯಸ್ಸು ತಲುಪುವ ಮುಂಚೆಯೇ ಜನರನ್ನು ನಾನಾ ರೋಗಗಳು ಕಾಡುತ್ತಿವೆ. ಹೀಗಾಗಿಯೇ 50 ವರ್ಷ ಕಾಲ ಆರೋಗ್ಯವಾಗಿ ಜೀವಿಸಿದರೆ, ನಂತರದ ಪ್ರತಿ ವರ್ಷವನ್ನು ಬೋನಸ್ ಎಂದೇ ಪರಿಗಣಿಸಬೇಕಾದ ಪರಿಸ್ಥಿತಿ ಇದೆ. ಆದರೆ, ಇಲ್ಲೋರ್ವ ಅಜ್ಜಿ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿಯಾಗಿ 34 ವರ್ಷಗಳೇ ಕಳೆದು ಹೋಗಿವೆ. ಆದರೂ, ಕಾಲೇಜಿಗೆ ಬಂದು ಪಾಠ ಮಾಡುತ್ತಾರೆ!..
ಹೌದು, ಆಂಧ್ರಪ್ರದೇಶದ ವಿಶಾಖಪಟ್ಟಣಂನ ಶಾಂತಮ್ಮ ಎಂಬ ಗಟ್ಟಿಗಿತ್ತಿಯೇ ಅಜ್ಜಿ. ಅವರಿಗೆ ಈಗ ಬರೋಬ್ಬರಿ 95 ವರ್ಷ. ಈ ವಯಸ್ಸಿನಲ್ಲಿ ಮೊಣಕಾಲು ನೋವು ಸಾಮಾನ್ಯ. ಅವರ ಎರಡೂ ಮೊಣಕಾಲುಗಳಿಗೂ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಊರುಗೋಲುಗಳ ಆಸರೆಯ ಮೇಲೆ ನಡೆಯುತ್ತಾರೆ. ಆದರೆ, ಸುಮ್ಮನೆ ಕುಳಿತುಕೊಳ್ಳಲ್ಲ. 95ರ ಇಳಿ ವಯಸ್ಸಿನಲ್ಲೂ ದೂರದ ಪ್ರಯಾಣ ಮಾಡಿ ಬೋಧನೆ ಮಾಡುತ್ತಿದ್ದಾರೆ. ಹೀಗಾಗಿಯೇ ಶಾಂತಮ್ಮ ವಿಶ್ವದ ಅತ್ಯಂತ ಹಿರಿಯ ಪ್ರಾಧ್ಯಾಪಕಿ ಎಂಬ ಹೆಗ್ಗಳಿಕೆಯೊಂದಿಗೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಸೇರುವ ಹೊಸ್ತಿಲಲ್ಲಿದ್ದಾರೆ.
1947ರಲ್ಲಿ ವೃತ್ತಿಗೆ ಸೇರ್ಪಡೆ: ಅಜ್ಜಿಯ ಪೂರ್ಣ ಹೆಸರು ತಿರುಕುರಿ ಶಾಂತಮ್ಮ. ಇವರು ಎವಿಎನ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮತ್ತು ಆಂಧ್ರ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಆನರ್ಸ್ ಪದವಿ ಹಾಗೂ ಪಿಹೆಚ್‌ಡಿ ಮುಗಿಸಿದ್ದಾರೆ. 1947ರಲ್ಲಿ ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದಲ್ಲೇ ಶಾಂತಮ್ಮ ಆಂಧ್ರ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇರಿಕೊಂಡರು. ಅಂದಿನಿಂದ ಶಾಂತಮ್ಮ ಬಿಡುವಿಲ್ಲದೇ ಪಾಠ, ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದ ಮೊದಲ ಮಹಿಳೆ: ಶಾಂತಮ್ಮ ವೈದ್ಯಕೀಯ ಭೌತಶಾಸ್ತ್ರ, ರೇಡಿಯಾಲಜಿ, ಅನಸ್ತೇಷಿಯಾ ಮುಂತಾದ ವಿಷಯಗಳನ್ನು ಬೋಧಿಸುತ್ತಾರೆ. ಅಲ್ಲದೇ, ಬ್ರಿಟಿಷ್ ರಾಯಲ್ ಸೊಸೈಟಿಯ ಪ್ರೊಫೆಸರ್‌ಶಿಪ್‌ಗಳಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದ ಮೊದಲ ಮಹಿಳೆ ಎಂಬ ಖ್ಯಾತಿಯೂ ಇವರದ್ದು.
ಇಷ್ಟೇ ಅಲ್ಲ, ಲೇಸರ್ ತಂತ್ರಜ್ಞಾನ, ಪೆಟ್ರೋಲ್ನಲ್ಲಿನ ಕಲ್ಮಶ ಪತ್ತೆ ಮುಂತಾದ ಹಲವು ಯೋಜನೆಗಳಲ್ಲಿ ಶಾಂತಮ್ಮ ಸಂಶೋಧನೆ ಮಾಡಿದ್ದಾರೆ. ಸ್ಪೆಕ್ಟ್ರೋಸ್ಕೋಪಿಯಲ್ಲಿ ಗಮನಾರ್ಹ ಸಂಶೋಧನೆ ಮಾಡಿದ ಡಾ.ರಂಗಧಾಮ ರಾವ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಗಳನನ್ನು ಕೈಕೊಂಡಿದ್ದಾರೆ. ಅನೇಕ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಶಾಂತಮ್ಮ ಅವರ ಅನುಭವಗಳ ಬಗ್ಗೆ ತಿಳಿದುಕೊಳ್ಳಲೆಂದೇ ಅಮೆರಿಕ, ಬ್ರಿಟನ್ ಹಾಗೂ ದಕ್ಷಿಣ ಕೊರಿಯಾದ ಹಲವಾರು ವಿಶ್ವವಿದ್ಯಾನಿಲಯಗಳು ಆಹ್ವಾನಿಸಿವೆ.
1989ರಲ್ಲಿ ಸೇವೆಯಿಂದ ನಿವೃತ್ತಿ: ಶಾಂತಮ್ಮ ಅವರ ಮಾರ್ಗದರ್ಶನದಲ್ಲಿ 17 ಮಂದಿ ವಿದ್ಯಾರ್ಥಿಗಳು ಪಿಹೆಚ್‌ಡಿ ಮುಗಿಸಿದ್ದಾರೆ. ಪ್ರಾಧ್ಯಾಪಕ ವೃತ್ತಿಯಿಂದ 1989ರಲ್ಲಿ ನಿವೃತ್ತಿಯಾಗಿದ್ದಾರೆ. ಅಂದರೆ ನಿವೃತ್ತಿಯಾಗಿ 34 ವರ್ಷಗಳು ಕಳೆದರೂ ಶಾಂತಮ್ಮ ಇಂದಿಗೂ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.
ಆಗಿನ ಆಂಧ್ರ ವಿಶ್ವವಿದ್ಯಾಲಯ ವಿ ಸಿ ಸಿಂಹಾದ್ರಿ ಅವರು ಗೌರವಧನದ ಮೇಲೆ ಪ್ರಾಧ್ಯಾಪಕರಾಗಿ ಶಾಂತಮ್ಮ ಅವರನ್ನು ಮುಂದುವರಿಸಿದರು. ಅವರ ನಂತರ ಅಧಿಕಾರ ವಹಿಸಿಕೊಂಡ ಜಿ.ಎಸ್.ಎನ್.ರಾಜು ಕೂಡ ಶಾಂತಮ್ಮ ಅವರ ಸೇವೆಯನ್ನು ಮುಂದುವರಿಸಿದ್ದಾರೆ. ವಿಶೇಷವೆಂದರೆ ಈ ಜಿ.ಎಸ್.ಎನ್. ರಾಜು ಅವರು ಶಾಂತಮ್ಮ ಅವರ ಶಿಷ್ಯ.!
ವಾರಕ್ಕೆ ನಾಲ್ಕು ತರಗತಿ, 60 ಕಿ.ಮೀ. ಪ್ರಯಾಣ: ಪ್ರಸ್ತುತ ಶಾಂತಮ್ಮ ವಾರಕ್ಕೆ ನಾಲ್ಕು ತರಗತಿಗಳಿಗೆ ಪಾಠ ಮಾಡುತ್ತಾರೆ. ಇದಕ್ಕಾಗಿ ಅವರು 60 ಕಿ.ಮೀ. ದೂರದ ಪ್ರಯಾಣವನ್ನೂ ಕೈಗೊಳ್ಳುತ್ತಾರೆ. ವಿಶಾಖಪಟ್ಟಣಂನಿಂದ 60 ಕಿ.ಮೀ ಕ್ರಮಿಸಿ ವಿಶ್ವವಿದ್ಯಾಲಯಕ್ಕೆ ಹೋಗುತ್ತಾರೆ.
ಶಾಂತಮ್ಮ ಕೇವಲ ಬೋಧನೆ ಮತ್ತು ಸಂಶೋಧನೆ ಮಾತ್ರವಲ್ಲ, ಆಧ್ಯಾತ್ಮಿಕ ಚಿಂತನೆಯಲ್ಲೂ ಒಲವು ಹೊಂದಿದ್ದಾರೆ. ಆಧ್ಯಾತ್ಮಿಕ ಆಸಕ್ತಿಯಿಂದ ಭಗವದ್ಗೀತೆಯನ್ನು ಅಧ್ಯಯನ ಮಾಡಿ ತೆಲುಗಿಗೆ ಅನುವಾದಿಸಿದ್ದಾರೆ. ವೇದ ಗಣಿತದ 29 ಸೂತ್ರಗಳನ್ನು ಸಂಶೋಧಿಸಿ, ಅವುಗಳನ್ನು ಏಳು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಅವರು ಪ್ರಸ್ತುತ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ತಮ್ಮ ಸಂಶೋಧನೆಯನ್ನು ಮುಂದುವರೆಸಿದ್ದಾರೆ.
ಶಾಂತಮ್ಮ ಹೇಳುವುದೇನು?: ಪ್ರಸ್ತುತ ನಾನು ಕ್ಯಾನ್ಸರ್ ರೋಗಿಗಳಿಗೆ ಪರಿಹಾರವನ್ನು ನೀಡುವಂತಹ ಔಷಧಿಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಎಲ್ಲರೂ ಕೆಲಸ ಮಾಡುತ್ತಲೇ ಇರಬೇಕು. ನಮ್ಮದು ಅಮೂಲ್ಯವಾದ ಜೀವನ, ಹೀಗಾಗಿ ನಾವು ಅಮೂಲ್ಯವಾಗಿಯೇ ಬದುಕಬೇಕು. ನಿಷ್ಪ್ರಯೋಜಕ ವಿಷಯಗಳಿಗೆ ಯಾರೂ ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬಾರದು ಎಂದು ಹಿರಿಯ ಪ್ರಾಧ್ಯಾಪಕಿ ಶಾಂತಮ್ಮ ಸಲಹೆ ನೀಡುತ್ತಾರೆ.
ಶಿಷ್ಯ ಜಿ.ಎಸ್.ಎನ್.ರಾಜು ಮಾತು: ಶಾಂತಮ್ಮ ಅವರ ಶಿಷ್ಯರಾದ ಸದ್ಯ ಸೆಂಚುರಿಯನ್ ವಿಶ್ವವಿದ್ಯಾಲಯದ ಕುಲಪತಿ ಜಿ.ಎಸ್.ಎನ್. ರಾಜು ಮಾತನಾಡಿ, ಸುಮಾರು 50 ವರ್ಷಗಳ ಹಿಂದೆ ನಮ್ಮ ಬ್ಯಾಚ್‌ಗೆ ಶಾಂತಮ್ಮ ಭೌತಶಾಸ್ತ್ರ ಬೋಧಿಸಿದ್ದರು. ಆಗ ಅದರಲ್ಲಿ ನೂರಕ್ಕೆ 70 ಅಂಕ ಬರುವುದು ಕಷ್ಟವಾಗಿತ್ತು. ಆದರೆ, ಶಾಂತಮ್ಮ ಅವರ ಪಾಠದಿಂದ ನಾನು ನೂರಕ್ಕೆ 94 ಅಂಕ ಪಡೆದಿದ್ದೆ. ಅಂದಿನಿಂದ ನಾನು ಮೇಡಂ ಅವರ ಆತ್ಮೀಯ ವಿದ್ಯಾರ್ಥಿಯಾದೆ. ನನ್ನ ನೆಚ್ಚಿನ ಶಿಕ್ಷಕಿಯೂ ಶಾಂತಮ್ಮ ಅವರಾಗಿದ್ದಾರೆ ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ಹಣದ ಬ್ಯಾಗ್ ಠಾಣೆಗೆ ತಂದೊಪ್ಪಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಕಾನ್ಸ್‌ಟೇಬಲ್!