ಕೋಲ್ಕತ್ತಾ: ದೇಶಾದ್ಯಂತ ವಿಪರೀತ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಅಲೆಯ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಚುನಾವಣಾ ಮತ ಎಣಿಕೆಗಾಗಿ ಅತ್ಯಂತ ಬಿಗಿ ನಿಯಮಗಳನ್ನು ಜಾರಿ ಮಾಡಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ಆರ್ಟಿಪಿಸಿಆರ್ ವರದಿ ಹೊಂದಿರದ ಅಥವಾ ಎರಡು ಡೋಸ್ ಲಸಿಕೆ ಪಡೆದುಕೊಂಡಿರದ ಚುನಾವಣಾ ಅಭ್ಯರ್ಥಿ ಅಥವಾ ಪಕ್ಷದ ಏಜೆಂಟರುಗಳಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
ಚುನಾವಣಾ ಮತ ಎಣಿಕೆಯ ಮುನ್ನಾದಿನದಂದು ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವ ಹೊಣೆಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಇನ್ನು ಮತ ಎಣಿಕೆ ನಡೆಯುತ್ತಿರುವಾಗ ಎಣಿಕೆ ಕೇಂದ್ರದ ಮುಂದೆ ಜನತೆ ಸೇರಲು ಅವಕಾಶವಿಲ್ಲ.
ಮತ ಎಣಿಕೆ ದಿನವಾದ ಮೇ 2 ರಂದು ಯಾವುದೇ ವಿಜಯೋತ್ಸವ ನಡೆಸುವಂತಿಲ್ಲ ಎಂದು ಚು. ಆಯೋಗ ಈ ಮುನ್ನವೇ ಆದೇಶ ಜಾರಿ ಮಾಡಿದೆ. ಮತ ಎಣಿಕೆ ಕೇಂದ್ರದಲ್ಲಿ ಕೂರುವ ಇಬ್ಬರು ಪೋಲಿಂಗ್ ಏಜೆಂಟರ ಮಧ್ಯೆ ಕೂರುವ ಓರ್ವ ಏಜೆಂಟ್ ಪಿಪಿಇ ಕಿಟ್ ಧರಿಸಿರಲಿದ್ದಾನೆ ಎಂದು ಆಯೋಗ ಹೇಳಿದೆ.
ಪಶ್ಚಿಮ ಬಂಗಾಳ, ಅಸ್ಸೋಂ, ತಮಿಳು ನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಮತ ಎಣಿಕೆಯು ಮೇ 2 ರಂದು ನಡೆಯಲಿದೆ. ಬಂಗಾಳದಲ್ಲಿ ಎಂಟನೇ ಹಾಗೂ ಅಂತಿಮ ಹಂತದ ಮತದಾನ ನಾಳೆ ನಡೆಯಲಿದೆ. ಇದನ್ನು ಹೊರತು ಪಡಿಸಿದರೆ ಇತರ ಎಲ್ಲ ರಾಜ್ಯಗಳ ಚುನಾವಣೆ ಮುಗಿದಿದೆ.