ನವದೆಹಲಿ: ಐದು ರಾಜ್ಯಗಳಲ್ಲಿ ನಡೆದ ಆರು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭೆ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟೂ ಏಳು ಕ್ಷೇತ್ರಗಳಲ್ಲಿ ಬಿಜೆಪಿ 2, ಕಾಂಗ್ರೆಸ್ 2 ಕಡೆಗಳಲ್ಲಿ ಗೆದ್ದರೆ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕ ದಳ ಹಾಗೂ ಬಿಜೆಡಿ ತಲಾ ಒಂದು ಸ್ಥಾನ ಗೆದ್ದಿವೆ.
ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ನಿಧನದಿಂದ ತೆರವಾಗಿದ್ದ ಉತ್ತರ ಪ್ರದೇಶದ ಮೈನ್ಪುರಿ ಲೋಕಸಭಾ ಉಪಚುನಾವಣೆಯಲ್ಲಿ ಅವರ ಸೊಸೆ ಡಿಂಪಲ್ ಯಾದವ್ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ಎಸ್ಪಿ ತನ್ನ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ಪಡೆದಿದೆ.
ಬಿಹಾರದ ಕುರ್ಹಾನಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇದಾರ್ ಪ್ರಸಾದ್ ಗುಪ್ತಾ ಜಯ ದಾಖಲಿಸಿದ್ದಾರೆ. ಛತ್ತೀಸ್ಗಢದ ಬಾನುಪ್ರತಾಪ್ಪುರ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಸಾವಿತ್ರಿ ಮಂಡಾವಿ ಗೆಲುವು ಕಂಡರೆ, ರಾಜಸ್ಥಾನದ ಸರ್ದಾರ್ಶಹರ್ ವಿಧಾನಸಭಾ ಕ್ಷೇತ್ರದ ಉಪ ಕದನಲ್ಲಿ ಕಾಂಗ್ರೆಸ್ನ ಅನಿಲ್ ಕುಮಾರ್ ಮೇಲುಗೈ ಸಾಧಿಸಿದ್ದಾರೆ.
ಉತ್ತರ ಪ್ರದೇಶದ ರಾಮ್ಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾ ಗೆಲುವಿನ ನಗೆ ಬೀರಿದ್ದಾರೆ. ಖಟೌಲಿ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕ ದಳದ ಮದನ್ ಭಾಟಿಯಾ ಜಯಶಾಲಿಯಾದರೆ, ಒಡಿಶಾದ ಪದಂಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಡಿಯ ಬರ್ಶಾ ಸಿಂಗ್ ಗೆಲುವು ಕಂಡಿದ್ದಾರೆ.