ಗುವಾಹಟಿ(ಅಸ್ಸೋಂ): ಜೈಲಿನಲ್ಲಿದ್ದುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿವೋರ್ವ ಇದೀಗ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಸ್ಸೋಂ ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ ವರ್ಷ ಅಸ್ಸೋಂನಲ್ಲಿ ಪ್ರತಿಭಟನೆ ನಡೆದಿದ್ದ ವೇಳೆ ಆರ್ಟಿಐ ಕಾರ್ಯಕರ್ತನು ಆಗಿರುವ ರೈತ ಮುಖಂಡ ಅಖಿಲ್ ಗೊಗೊಯ್ ಅವರನ್ನ ಬಂಧಿಸಲಾಗಿತ್ತು. ಅಲ್ಲಿಂದಲೇ ಅಸ್ಸೋಂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಇದೀಗ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಜೈಲಿನಿಂದಲೇ ಸ್ಪರ್ಧಿಸಿ ಚುನಾವಣೆಯಲ್ಲಿ ಜಯ ಗಳಿಸಿರುವ ಅಸ್ಸೋಂನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಸ್ಸೋಂನ ಸಿಬ್ಸಾಗರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಇವರು ಒಂದೇ ಒಂದು ದಿನ ಪ್ರಚಾರ ನಡೆಸಿಲ್ಲ. ಆದರೂ 57,173 ಮತ ಪಡೆದು ಬಿಜೆಪಿ ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಿದ್ದಾರೆ. ಇಲ್ಲಿ ಕಾಂಗ್ರೆಸ್ 45,394 ಮತ ಹಾಗೂ ಬಿಜೆಪಿ 19,323 ಮತ ಪಡೆದುಕೊಂಡಿದೆ. ಗೊಗೊಯ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸುರಭಿ ರಾಜ್ಕೋನ್ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಗೆಲುವು.. ದೀದಿಗೆ ಪಿಎಂ ಅಭಿನಂದನೆ, ಕೇಂದ್ರದಿಂದ ಬೆಂಬಲದ ಭರವಸೆ
ಅಸ್ಸೋಂನಲ್ಲಿ ಪೌರತ್ವ ವಿರೋಧ ತಿದ್ದುಪಡಿ ಕಾಯ್ದೆ(ಸಿಎಎ) ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದ ವೇಳೆ ಗೊಗೊಯ್ ಬಂಧನ ಮಾಡಲಾಗಿತ್ತು. ಇದಾದ ಬಳಿಕ ನಕ್ಸಲರೊಂದಿಗೆ ನಿಕಟ ಸಂಪರ್ಕವಿದೆ ಎಂಬ ಆರೋಪದ ಮೇಲೆ ಎನ್ಐಎ ವಶಕ್ಕೆ ಪಡೆದುಕೊಂಡಿತ್ತು. ಇದಾದ ಬಳಿಕ ಅವರನ್ನ ವಿಚಾರಣೆ ರೂಪದಲ್ಲಿ ಜೈಲಿನಲ್ಲಿಡಲಾಗಿತ್ತು. ಅಲ್ಲಿಂದ ಚುನಾವಣೆ ಸ್ಪರ್ಧಿಸಿದ್ದ ಅವರು ಇದೀಗ ವಿಜಯಪತಾಕೆ ಹಾರಿಸಿದ್ದಾರೆ.