ಹೈದರಾಬಾದ್ : ಅಸ್ಸೋಂನಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಕೊನೆಯ ಹಂತದ ಮತದಾನ ಮಂಗಳವಾರ (ಏ.06 ರಂದು) ನಡೆಯಲಿದೆ. 39,07,963 ಮಹಿಳೆಯರು ಮತ್ತು 139 ತೃತೀಯ ಲಿಂಗಿಗಳು ಸೇರಿ ಒಟ್ಟು 79,19,641 ಮತದಾರರು ರಾಜ್ಯಾದ್ಯಂತ 11 ಜಿಲ್ಲೆಗಳಲ್ಲಿ 40 ಕ್ಷೇತ್ರಗಳ 11,401 ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ.
31 ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ 337 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮಂಗಳವಾರ ನಿರ್ಧರಿಸಲಿದ್ದಾರೆ. 337 ಅಭ್ಯರ್ಥಿಗಳಲ್ಲಿ 25 ಮಹಿಳೆಯರು, 312 ಪುರುಷ ಅಭ್ಯರ್ಥಿಗಳು ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

40 ವಿಧಾನಸಭಾ ಕ್ಷೇತ್ರಗಳಲ್ಲಿ 54-ಗುವಾಹಟಿ ಪಶ್ಚಿಮ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳಿದ್ದಾರೆ (15), 48-ಬೊಕೊ ಎಸ್‌ಸಿ ಕನಿಷ್ಠ ಸಂಖ್ಯೆಯ ಅಭ್ಯರ್ಥಿಗಳನ್ನು ಹೊಂದಿದೆ (3).
ಒಟ್ಟು ಅಭ್ಯರ್ಥಿಗಳಲ್ಲಿ 60 (18%) ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದು, 45 (13%) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಐಎನ್‌ಸಿಯ 24 ಅಭ್ಯರ್ಥಿಗಳಲ್ಲಿ 14 (58%) ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದರೆ, 24ರಲ್ಲಿ 13 (54%) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದಾರೆ.

ಅಸ್ಸೋಂ ವಿಧಾನಸಭಾ ಚುನಾವಣೆಯನ್ನು ಮಾರ್ಚ್ 27ರಂದು ಮೊದಲ ಮತ್ತು ಏಪ್ರಿಲ್ 1ರಂದು ಎರಡನೇ ಹಂತದ ಚುನಾವಣೆ ನಡೆಸಿತ್ತು. ಮಾರ್ಚ್ 27ರಂದು ಮೊದಲ ಹಂತದಲ್ಲಿ 47 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಒಟ್ಟು 264 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆದಿದ್ದಾನೆ.
ಏಪ್ರಿಲ್ 1ರಂದು ಎರಡನೇ ಹಂತದಲ್ಲಿ 39 ಕ್ಷೇತ್ರಗಳಿಂದ 345 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೂರನೇ ಹಂತದ ಮತದಾನದ ವೇಳೆ 40 ಕ್ಷೇತ್ರಗಳಲ್ಲಿ 337 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ.

ಏತನ್ಮಧ್ಯೆ, ಅಸ್ಸೋಂನಲ್ಲಿ ವಿಧಾನಸಭಾ ಚುನಾವಣೆಗಳು ರಾಜ್ಯದ ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ಕಲಾವಿದರು ಮತ್ತು ಕುಶಲಕರ್ಮಿಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶಿಸುವ ಮೂಲಕ ವಿಭಿನ್ನ ವಾತಾವರಣದೊಂದಿಗೆ ನಡೆಸಲಾಗುತ್ತಿದೆ. ಜೊತೆಗೆ ಪರಿಸರಸ್ನೇಹಿ ಮತದಾನ ಕೇಂದ್ರಗಳನ್ನು ಸ್ಥಾಪಿಸಿ ಮತದಾರರಿಗೆ ಹೊಸ ಆಕರ್ಷಣೆಯಾಗಿದೆ.

ನೇರ ಸಂಪರ್ಕಗಳನ್ನು ತಪ್ಪಿಸಲು ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಪ್ರತಿ ಬೂತ್‌ಗೆ ಮತದಾರರ ಸಂಖ್ಯೆಯನ್ನ ಗರಿಷ್ಠ 1,000ಕ್ಕಿಳಿಸಲಾಗಿದೆ. ಚುನಾವಣಾ ಆಯೋಗವು ವಿಕಲಚೇತನರು, ಕೋವಿಡ್-19 ಸೋಂಕಿತರು ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ವ್ಯವಸ್ಥೆ ಮಾಡಿದೆ.
ಮತದಾನ ಪ್ರಾರಂಭವಾಗುವ ಎರಡು ವಾರಗಳ ಮೊದಲು ಅಂಚೆ ಮತದಾನ ನಡೆಸಲಾಯಿತು. 126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಅಸ್ಸೋಂ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಮೇ 2ರಂದು ಘೋಷಿಸಲಾಗುವುದು.