ಶಿವಸಾಗರ್ (ಅಸ್ಸೋಂ): ಮಾನವ ಕಳ್ಳಸಾಗಣೆ ಹಾಗೂ ಶೋಷಣೆಯ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ನಾಲ್ಕು ವರ್ಷಗಳಿಂದ ಮಾನವ ಕಳ್ಳಸಾಗಣೆ ದಂಧೆಯ ಸೆರೆಯಲ್ಲಿದ್ದ ಅಸ್ಸೋಂನ ವ್ಯಕ್ತಿಯೊಬ್ಬರನ್ನು ಅರುಣಾಚಲ ಪ್ರದೇಶದಲ್ಲಿ ರಕ್ಷಣೆ ಮಾಡಲಾಗಿದೆ. ಇದರೊಂದಿಗೆ ಆಘಾತಕಾರಿ ಮಾಹಿತಿ ಕೂಡ ಹೊರ ಬಿದ್ದಿದೆ.
ಶಿವಸಾಗರ್ ಜಿಲ್ಲೆಯ ಹಲುಯಟಿಂಗ್ ಬಾರ್ಸಿಲಾ ನಿವಾಸಿ ತುಲಾನ್ ಗೊಗೊಯ್ ಎಂಬಾತ ನಾಲ್ಕು ವರ್ಷಗಳ ಹಿಂದೆ ಮಾನವ ಕಳ್ಳಸಾಗಣೆಯ ಬಲೆಗೆ ಬಿದ್ದಿದ್ದರು. ಇದೀಗ ಅನಿನಿ ಪೊಲೀಸ್ ಠಾಣೆಯ ಅಧಿಕಾರಿಗಳ ನೆರವಿನೊಂದಿಗೆ ಸೆಪ್ಟೆಂಬರ್ 27ರಂದು ಆತನನ್ನು ರಕ್ಷಿಸಲಾಗಿದೆ. ಅರುಣಾಚಲ ಪ್ರದೇಶದ ದಿಬಾಂಗ್ ವ್ಯಾಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಪತ್ತೆ ಹಚ್ಚಲಾಗಿದೆ. ಈಗ ಈತ ತನ್ನ ಕುಟುಂಬ ಸದಸ್ಯರನ್ನು ಸೇರಿಕೊಂಡಿದ್ದು, ತುಲಾನ್ ಗೊಗೊಯ್ ತಾನು ಅನುಭವಿಸಿದ ಸಂಕಟ, ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.
ಕೆಲಸ ಹುಡುಕಿಕೊಂಡು ಹೋಗಿದ್ದ ವ್ಯಕ್ತಿ: ತುಲಾನ್ ಗೊಗೊಯ್ ನಾಲ್ಕು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಹೋಗಿದ್ದರು. ಆದಾಗ್ಯೂ, ತಮ್ಮದೇ ಸಂಬಂಧಿಗಳಾದ ದುಲು ಬುರಾಗೊಹೈನ್ ಮತ್ತು ಆತನ ಸ್ನೇಹಿತ ಅರವಿಂದ್ ಹಜಾರಿಕಾ ಮೂಲಕ ಮಾನವ ಕಳ್ಳಸಾಗಣೆ ಬಲೆಗೆ ಸಿಲುಕಿಕೊಂಡಿದ್ದರು. ಹೆಚ್ಚಿನ ಮಾಸಿಕ ಸಂಬಳ ನೀಡುವ ಅರವಿಂದ್ ಹಜಾರಿಕಾ ಆಮಿಷವೊಡ್ಡಿದ್ದರು. ನಂತರ ಅರುಣಾಚಲ ಪ್ರದೇಶದಲ್ಲಿ ಗಣನೀಯ ಮೊತ್ತದ ಹಣಕ್ಕೆ ತನ್ನನ್ನು ಮಾರಾಟ ಮಾಡಿದ್ದರು ಎಂದು ಗೊಗೊಯ್ ಹೇಳಿದ್ದಾರೆ.
ಹಲ್ಲುಗಳನ್ನು ಮುರಿದ ದಂಧೆಕೋರರು: ಕಳ್ಳಸಾಗಣೆದಾರರ ಸೆರೆಯಲ್ಲಿದ್ದಾಗ ತುಲಾನ್ ಗೊಗೊಯ್ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಲಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಮರಳಲು ಪ್ರಯತ್ನಿಸಿದಾಗ ಹಲ್ಲುಗಳನ್ನು ಮುರಿಯಲಾಗಿದೆ ಎಂದು ತಿಳಿಸಿದ್ದಾರೆ. ಈ ಆಘಾತಕಾರಿ ಮಾಹಿತಿ ಬಹಿರಂಗ ಪಡಿಸಿದ ಬೆನ್ನಲ್ಲೇ ಹಲುಯೇಟಿಂಗ್ ಠಾಣೆಯಲ್ಲಿ ಪೊಲೀಸರು ಈ ದಂಧೆ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಸಂಪೂರ್ಣ ಜಾಲದ ಬಗ್ಗೆ ತನಿಖೆ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಇಷ್ಟೇ ಅಲ್ಲ, ತುಲಾನ್ ಗೊಗೊಯ್ ಪ್ರಕರಣವು ಈ ಮಾನವ ಕಳ್ಳಸಾಗಣೆ ಜಾಲದ ಸಂತ್ರಸ್ತರು ಹಾಗೂ ಅರುಣಾಚಲ ಪ್ರದೇಶದಲ್ಲಿ ಸಿಲುಕಿರುವ ಅಸ್ಸೋಂನ ಇತರ ಅನೇಕ ಯುವಕರ ದುಃಸ್ಥಿತಿಯ ಮೇಲೆ ಬೆಳಕು ಚೆಲ್ಲುವಂತೆ ಮಾಡಿದೆ. ತುಲಾನ್ ಗೊಗೋಯ್ ಸಹ ಮಾನವ ಕಳ್ಳಸಾಗಣೆ ಜಾಲದಲ್ಲಿ ಸಿಕ್ಕಿಬಿದ್ದಿರುವ ಯುವಕರನ್ನು ರಕ್ಷಣೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಜೊತೆಗೆ ನಾಲ್ಕು ವರ್ಷಗಳ ಕಾಲ ತನ್ನ ಅನುಭವಿಸಿದ ನೋವಿಗೆ ಕಾರಣವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜುರಗಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಾನವ ಕಳ್ಳಸಾಗಣೆ ಪ್ರಕರಣ: ಐದು ಸಾವಿರಕ್ಕೆ ಮಗು ಮಾರಾಟದ ಶಂಕೆ.. ತನಿಖೆ ಚುರುಕು!