ಗುವಾಹಟಿ: ಅಸ್ಸಾಂನಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಸ್ಥಿತಿ ತಲೆದೋರಿದೆ. ಪ್ರಸ್ತುತ ರಾಜ್ಯದ ಏಳು ಜಿಲ್ಲೆಗಳಲ್ಲಿ ಸುಮಾರು 57,000 ಜನರು ಪ್ರವಾಹದಿಂದ ನಲುಗಿ ಹೋಗಿದ್ದು, ಈವರೆಗೆ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ಮತ್ತು ನೆರೆಯ ರಾಜ್ಯಗಳಾದ ಮೇಘಾಲಯ, ಅರುಣಾಚಲ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು ಹಲವು ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಸುಮಾರು 222 ಗ್ರಾಮಗಳು ಹಾನಿಗೊಳಗಾಗಿವೆ, 10321.44 ಹೆಕ್ಟೇರ್ ಕೃಷಿ ಭೂಮಿ ಪ್ರವಾಹದ ನೀರಿನಲ್ಲಿ ಮುಳುಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರವಾಹ ವರದಿ ತಿಳಿಸಿದೆ.
ಮನುಷ್ಯರನ್ನು ಹೊರತುಪಡಿಸಿ 1,434 ಪ್ರಾಣಿಗಳಿಗೂ ಪ್ರವಾಹದ ಬಿಸಿ ತಟ್ಟಿದ್ದು, ಒಟ್ಟು 202 ಮನೆಗಳಿಗೆ ಹಾನಿಯಾಗಿದೆ. ಸೇನೆ, ಅರೆ ಮಿಲಿಟರಿ ಪಡೆಗಳು, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಹೋಜೈ, ಲಖಿಂಪುರ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಹಲವಾರು ರಸ್ತೆಗಳು, ಸೇತುವೆಗಳು ಮತ್ತು ಕಾಲುವೆಗಳು ಹಾನಿಗೊಳಗಾಗಿವೆ.
ಸತತ ಮಳೆಯಿಂದ ದಿಮಾ ಹಸಾವೊ ಜಿಲ್ಲೆಯ 12 ಗ್ರಾಮಗಳಲ್ಲಿ ಶನಿವಾರ ಭೂಕುಸಿತ ಉಂಟಾಗಿದೆ. ಲುಮ್ಡಿಂಗ್ ವಿಭಾಗದ ಲುಮ್ಡಿಂಗ್-ಬದರ್‌ಪುರ್ ಬೆಟ್ಟದ ವಿಭಾಗದಲ್ಲಿ ನಿರಂತರ ಮಳೆ, ಭೂಕುಸಿತ ಮತ್ತು ಜಲಾವೃತವಾಗಿರುವ ಕಾರಣ ಈಶಾನ್ಯ ಫ್ರಾಂಟಿಯರ್ ರೈಲ್ವೆ ತನ್ನ ರೈಲು ಸೇವೆಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ.
ಡಿಟೋಕ್ಚೆರಾ ನಿಲ್ದಾಣದಲ್ಲಿ ಸಿಲುಕಿರುವ ಸುಮಾರು 1,245 ರೈಲ್ವೆ ಪ್ರಯಾಣಿಕರನ್ನು ಬಾದರ್‌ಪುರ ಮತ್ತು ಸಿಲ್ಚಾರ್‌ಗೆ ಕರೆ ತರಲಾಗಿದೆ. 119 ಪ್ರಯಾಣಿಕರನ್ನು ಭಾರತೀಯ ವಾಯುಪಡೆಯು ಸಿಲ್ಚಾರ್‌ಗೆ ಏರ್‌ಲಿಫ್ಟ್ ಮಾಡಲಾಗಿದೆ ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ. ಪ್ರತಿಯೊಬ್ಬ ಪ್ರಯಾಣಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಬನ್ನಿ ಮಕ್ಕಳೇ ಶಾಲೆಗೆ.. ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಾರಂಭ; ಮಕ್ಕಳಿಗೆ ಅದ್ಧೂರಿ ಸ್ವಾಗತ