ಗುವಾಹಟಿ: ಅಸ್ಸೋಂನಲ್ಲಿ ನೂತನ ಸರ್ಕಾರ ರಚನೆಗೆ ಉಂಟಾಗಿದ್ದ ಬಿಕ್ಕಟ್ಟು ಇದೀಗ ಅಂತ್ಯಗೊಂಡಿದ್ದು, ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ನಾಳೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ನಾಳೆ ಮಧ್ಯಾಹ್ನ 12 ಗಂಟೆಗೆ ಈ ಸಮಾರಂಭ ನಡೆಯಲಿದ್ದು, ಈ ಮೂಲಕ ರಾಜ್ಯದ 21ನೇ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇವರ ಜತೆ ಕೆಲ ಶಾಸಕರು ಸಚಿವ ಸಂಪುಟ ಸದಸ್ಯರಾಗಿ ಪ್ರಮಾಣ ಸ್ವೀಕಾರ ಮಾಡುವ ಸಾಧ್ಯತೆ ಇದೆ. 2015ರವರೆಗೂ ಕಾಂಗ್ರೆಸ್ನಲ್ಲಿದ್ದ ಹಿಮಂತ ಬಿಸ್ವಾ, ಅಸ್ಸೋಂನಲ್ಲಿ ಕಾಂಗ್ರೆಸ್ನ ತರುಣ್ ಗೊಗೊಯ್ ಸರ್ಕಾರವಿದ್ದಾಗ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ: ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಕೇಂದ್ರ ಸಚಿವರ ಕಾರು.. ಪ್ರಾಣಾಪಾಯದಿಂದ ಪ್ರತಾಪ್ ಸಾರಂಗಿ ಪಾರು
ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದಿದ್ದ ಹಿಮಂತ ಬಿಸ್ವಾ ಶರ್ಮಾ ಹಾಗೂ ಸರ್ಬಾನಂದ ಸೋನೋವಾಲ್ ನಡುವೆ ಸಿಎಂ ಹುದ್ದೆಗೆ ಪೈಪೋಟಿ ನಡೆದಿತ್ತು. ಅದೇ ಕಾರಣಕ್ಕೆ ಇಬ್ಬರೂ ದೆಹಲಿಗೆ ತೆರಳಿದ್ದರು. ಈ ವೇಳೆ ಬಿಜೆಪಿ 52 ವರ್ಷದ ಹಿಮಂತಗೆ ಮಣೆ ಹಾಕಿದೆ. ಜತೆಗೆ ಇಂದು ನಡೆದ ಶಾಸಕಾಂಗ ಸಭೆಯಲ್ಲೂ ಅವರ ಹೆಸರನ್ನ ಅಂತಿಮಗೊಳಿಸಲಾಗಿದೆ.
ಇಂದು ಬೆಳಗ್ಗೆ ರಾಜೀನಾಮೆ ನೀಡಿದ್ದ ಸರ್ಬಾನಂದ
ಅಸ್ಸೋಂ ನೂತನ ಸಿಎಂ ಆಗಿ ಹಿಮಂತ ಆಯ್ಕೆಯಾಗುತ್ತಿದ್ದಂತೆ ಸರ್ಬಾನಂದ ಸೋನೋವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದನ್ನ ಗವರ್ನರ್ ಜಗದೀಶ್ ಮುಖಿ ಅಂಗೀಕಾರ ಮಾಡಿದ್ದಾರೆ.
2016ರಲ್ಲಿ ಸರ್ಬಾನಂದ್ ಸೋನೋವಾಲ್ ಅವರನ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಇದೀಗ ಮತ್ತೋರ್ವ ಮುಖಂಡನಿಗೆ ಕೇಂದ್ರ ಬಿಜೆಪಿ ಮಣೆ ಹಾಕಿದೆ. ಅಸ್ಸೋಂನ 126 ಕ್ಷೇತ್ರಗಳ ಚುನಾವಣೆಯಲ್ಲಿ ಎನ್ಡಿಎ 75 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.