ಧಾಮತಾರಿ (ಛತ್ತೀಸ್ಗಢ): ಛತ್ತೀಸ್ಗಢದ ಧಾಮತಾರಿ ಜಿಲ್ಲೆಯಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಬಹುದೂರ ಏಕಾಂಗಿಯಾಗಿ ಬೈಕ್ ಓಡಿಸಬೇಕೆಂಬ ಹವ್ಯಾಸಕ್ಕಾಗಿ ಸರ್ಕಾರಿ ಕೆಲಸವನ್ನೇ ಬಿಟ್ಟಿದ್ದಾರೆ.
ಎಎಸ್ಐ ಸಂಜಯ್ ಲಾಂಜೆ ಎಂಬುವವರೇ ತಮ್ಮ ನಿವೃತ್ತಿಯನ್ನು ತೆಗೆದುಕೊಂಡಿದ್ದಾರೆ. ಮೊದಲಿನಿಂದಲೂ ಸಂಜಯ್ ಲಾಂಜೆ ಅವರಿಗೆ ಬೈಕ್ ರೈಡಿಂಗ್ ಎಂದರೆ ಅಚ್ಚು- ಮೆಚ್ಚು. ರಜೆ ಸಿಕ್ಕಾಗಲೆಲ್ಲ ಧಾಮತಾರಿಯಿಂದ ಬೈಕ್ನಲ್ಲೇ ಗೋವಾ, ಜಗನ್ನಾಥಪುರಿ ಮುಂತಾದ ಸ್ಥಳಗಳಿಗೆ ತೆರಳುತ್ತಿದ್ದರು. ಆದರೆ, ಪೊಲೀಸ್ ಇಲಾಖೆಯಲ್ಲಿ ರಜೆ ಪಡೆಯುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಅವರು ಯಾವಾಗಲೂ ತಮ್ಮ ಹವ್ಯಾಸದೊಂದಿಗೆ ರಾಜಿ ಮಾಡಿಕೊಳ್ಳಬೇಕಾಗಿ ಬರುತ್ತಿತ್ತು.
ಆದರೆ, ಇದೀಗ ತಮ್ಮ ಹವ್ಯಾಸ ಪೂರೈಸಲೆಂದೇ ಎಎಸ್‌ಐ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನಾನು ಬೈಕ್‌ನಲ್ಲಿ ಕೇವಲ 24 ಗಂಟೆಗಳಲ್ಲಿ ಧಾಮತಾರಿಯಿಂದ ಗೋವಾ ತಲುಪಿದ್ದೆ. ಈಗಲೂ ನಾನು ಇಂತಹ ಸಾಹಸ ಮಾಡಲು ಬಯಸುತ್ತೇನೆ. ಬೈಕ್‌ನಲ್ಲಿ ಲಡಾಕ್‌ಗೆ ಪ್ರಯಾಣಿಸುವ ಆಸೆ ಇದೆ. ನಂತರ ದಕ್ಷಿಣ ಭಾರತಕ್ಕೂ ಬೈಕ್ನಲ್ಲೇ ಭೇಟಿ ನೀಡುವ ಯೋಜನೆ ಇದೆ. ಈ ದೀರ್ಘ ಪ್ರಯಾಣಕ್ಕೆ ರಜೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸರ್ಕಾರಿ ಹುದ್ದೆಯ ಸಂಬಂಧಗಳನ್ನು ಮುರಿಯಲು ನಿರ್ಧರಿಸಿದೆ ಎಂದು ತಿಳಿಸಿದರು.
ಪೊಲೀಸ್ ಪೇದೆಯಾಗಿ ನೇಮಕಗೊಂಡಿದ್ದ ಸಂಜಯ್ ಲಾಂಜೆ ಪ್ರಸ್ತುತ ಎಎಸ್‌ಐ ಹುದ್ದೆಯಲ್ಲಿದ್ದರು. 34 ವರ್ಷಗಳ ಸೇವೆಯ ನಂತರ ಇನ್ನೂ 7 ವರ್ಷಗಳ ಸೇವೆ ಬಾಕಿ ಉಳಿದಿದೆ. ಆದರೆ, ನೌಕರಿ ಮತ್ತು ಹವ್ಯಾಸ ಏಕಕಾಲದಲ್ಲಿ ಈಡೇರುತ್ತಿಲ್ಲ ಎಂಬ ಕಾರಣದಿಂದ ನೌಕರಿಯನ್ನೇ ತ್ಯಜಿಸಿದ್ದಾರೆ. ಸ್ವಯಂ ನಿವೃತ್ತಿ ಪಡೆದ ಅವರಿಗೆ ಎಸ್ಪಿ ಕಚೇರಿಯಲ್ಲಿ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಲಾಯಿತು. ಮುಂದಿನ ಜೀವನಕ್ಕೆ ಉತ್ತಮವಾಗಿರಲಿದೆ ಎಂದು ಎಸ್ಪಿ ಸೇರಿ ಇಡೀ ಪೊಲೀಸ್ ಸಿಬ್ಬಂದಿ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಭೋಪಾಲ್‌ನಲ್ಲಿ ಸಾಗರ್ ಸರಣಿ ಕಿಲ್ಲರ್ ಬಂಧನ.. ಪೊಲೀಸರನ್ನು ಅಭಿನಂದಿಸಿದ ನರೋತ್ತಮ್ ಮಿಶ್ರಾ