ಹೈದರಾಬಾದ್ : ಕ್ರೂಸ್ ಡ್ರಗ್ಸ್ ಪ್ರಕರಣ ಸಂಬಂಧ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಬಾಂಬೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಆರ್ಯನ್ ಖಾನ್ ಇನ್ಮುಂದೆ ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಆರ್ಯನ್ ಖಾನ್ಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ನೀಡಿತ್ತು. ಅದರಂತೆ ಎನ್‌ಸಿಬಿ ಕಚೇರಿಗೆ ಪ್ರತಿ ಶುಕ್ರವಾರ ಆರ್ಯನ್ ತೆರಳಿ ಸಹಿ ಹಾಕುವುದು ಷರತ್ತಿನಲ್ಲಿತ್ತು.
ಜಾಮೀನು ಪಡೆದ ಆರೋಪಿ ಊರು ಬಿಡಬಹುದು. ಸಹಿ ವಿಧಿಸಿ ಹೋದರೆ ಅವರು ನಗರದಲ್ಲಿಯೇ ಇದ್ದಾರೆ ಎಂಬುದು ಗೊತ್ತಾಗುತ್ತದೆ. ಈ ಕಾರಣಕ್ಕೆ ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ತೆರಳುವಂತೆ ಆರ್ಯನ್ ಖಾನ್ಗೆ ಸೂಚಿಸಲಾಗಿತ್ತು.
ನ್ಯಾಯಾಲಯದ ಆದೇಶದಂತೆ ಪ್ರತಿ ಶುಕ್ರವಾರ ಆರ್ಯನ್ ಖಾನ್ ಮುಂಬೈ ಎನ್‌ಸಿಬಿ ಕಚೇರಿಗೆ ತೆರಳಿ ಸಹಿ ಹಾಕಿ ಮರಳುತ್ತಿದ್ದರು. ಆದರೆ, ಇಲ್ಲೊಂದು ಸಮಸ್ಯೆ ಎದುರಾಗಿತ್ತು. ಪೊಲೀಸರಿಗೆ ಮಾಧ್ಯಮದ ಗುಂಪಿನಿಂದ ತಪ್ಪಿಸಿಕೊಂಡು ಆರ್ಯನ್ ಅವರನ್ನು ಕರೆದುಕೊಂಡು ಹೋಗಬೇಕಿತ್ತು.
ಇದು ಅವರಿಗೆ ತೊಂದರೆ ಉಂಟು ಮಾಡುತ್ತಿತ್ತು. ಹೀಗಾಗಿ, ಜಾಮೀನು ಆದೇಶದಲ್ಲಿ ಬದಲಾವಣೆ ಮಾಡುವಂತೆ ಡಿಸೆಂಬರ್ 10ರಂದು ಬಾಂಬೆ ಹೈಕೋರ್ಟ್‌ಗೆ ಆರ್ಯನ್ ಖಾನ್ ಮನವಿ ಮಾಡಿದ್ದರು. ಈ ಆಧಾರದ ಮೇಲೆ ಆರ್ಯನ್‌ಗೆ ನ್ಯಾಯಾಲಯ ವಿನಾಯಿತಿ ನೀಡಿದೆ. ಆರ್ಯನ್ ಖಾನ್ ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ.
ಪ್ರಕರಣದಲ್ಲಿ ವಿಚಾರಣೆಯ ಅಗತ್ಯವಿದ್ದಲ್ಲಿ ಆರ್ಯನ್ ಖಾನ್ ಅವರಿಗೆ 72 ಗಂಟೆಗಳ ಮುಂಚಿತವಾಗಿ ನೋಟಿಸ್ ನೀಡಿ ಕರೆಸಬಹುದು ಎಂದು ಕೋರ್ಟ್ ಹೇಳಿದೆ. ಸದ್ಯ ಪ್ರಕರಣ ರಾಜಧಾನಿ ದೆಹಲಿಗೆ ವರ್ಗಾವಣೆಗೊಂಡಿದೆ.
ಅಕ್ಟೋಬರ್ 2ರಂದು ಮುಂಬೈನಿಂದ ಗೋವಾಗೆ ತೆರಳುತ್ತಿದ್ದ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಆರೋಪದ ಮೇಲೆ ಆರ್ಯನ್ ಖಾನ್ ಸೇರಿದಂತೆ ಒಂಬತ್ತು ಜನರನ್ನು ಎನ್‌ಸಿಬಿ ಬಂಧಿಸಿತ್ತು. ಜಾಮೀನಿ ಸಿಗದೆ ಆರ್ಯನ್ ಖಾನ್ 26 ದಿನಗಳ ಕಾಲ ಕಸ್ಟಡಿಯಲ್ಲಿದ್ದರು. ಬಳಿಕ ಬಾಂಬೆ ಹೈಕೋರ್ಟ್ ಅಕ್ಟೋಬರ್ 28ರಂದು ಸ್ಟಾರ್ ಕಿಡ್‌ಗೆ ಜಾಮೀನು ನೀಡಿತ್ತು.
ಇದನ್ನೂ ಓದಿ: Bus fell in river: ಸೇತುವೆಯಿಂದ ನದಿಗೆ ಉರುಳಿದ ಆರ್ಟಿಸಿ ಬಸ್ : 9 ಮಂದಿ ಜಲಸಮಾಧಿ