ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸತತ ಮೂರನೇ ಅವಧಿಗೆ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ (National Convenor of AAP) ಆಯ್ಕೆಯಾಗಿದ್ದಾರೆ. ಇಂದು ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೇಜ್ರಿವಾಲ್ ಅವರನ್ನು ಮರು ನೇಮಕ ಮಾಡಲಾಗಿದೆ.
2016 ರ ಏಪ್ರಿಲ್ನಲ್ಲಿ ಎರಡನೇ ಬಾರಿಗೆ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಆಯ್ಕೆಯಾಗಿದ್ದ ಕೇಜ್ರಿವಾಲ್ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ 2019ರಲ್ಲಿ ಲೋಕಸಭಾ ಚುನಾವಣೆ ಮತ್ತು 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಅವರ ಅಧಿಕಾರಾವಧಿಯನ್ನು 2020 ರವರೆಗೆ ವಿಸ್ತರಿಸಲಾಗಿತ್ತು.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿಯಾದ ನಟ ಸೋನು ಸೂದ್.. ರಾಜಕೀಯಕ್ಕೆ ಬರ್ತಾರಾ..!?
2021ರ ಜನವರಿಯಲ್ಲಿ ನಡೆದ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ನಿಯಮವನ್ನು ತಿದ್ದುಪಡಿ ಮಾಡಿ ರಾಷ್ಟ್ರೀಯ ಸಂಚಾಲಕರ ಅಧಿಕಾರಾವಧಿಯನ್ನು 3 ವರ್ಷದಿಂದ 5 ವರ್ಷಗಳಿಗೆ ಹೆಚ್ಚಿಸಲಾಯಿತು. ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಆಯ್ಕೆ ಮಾಡುವ ಹಕ್ಕು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗಿರುತ್ತದೆ. ಅರವಿಂದ್ ಅವರನ್ನು ಎಎಪಿ ರಾಷ್ಟ್ರೀಯ ಸಂಚಾಲಕರಾಗಿ ರಾಷ್ಟ್ರೀಯ ಕಾರ್ಯಕಾರಿಣಿಯು ಮರು ನೇಮಕ ಮಾಡಿದ್ದು, ಮುಂದಿನ 5 ವರ್ಷಗಳ ಕಾಲ ಸಿಎಂ ಕೇಜ್ರಿವಾಲ್ ಈ ಹುದ್ದೆಯಲ್ಲಿರಲಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪಂಕಜ್ ಗುಪ್ತಾ ಹಾಗೂ ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ಎನ್.ಡಿ.ಗುಪ್ತಾ ಅವರನ್ನು ಮರು ಆಯ್ಕೆ ಮಾಡಲಾಗಿದೆ.