ಅಹಮದಾಬಾದ್: ಪಂಜಾಬ್‌ನಲ್ಲಿ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿರುವ ಆಮ್ ಆದ್ಮಿ ಪಾರ್ಟಿ (ಎಎಪಿ) ಗುರಿ ಈಗ ದಕ್ಷಿಣ ರಾಜ್ಯಗಳತ್ತ ನೆಟ್ಟಿದೆ. ಇದಕ್ಕೆ ಆರಂಭಿಕ ಪ್ರಯತ್ನ ಎಂಬಂತೆ ಗುಜರಾತ್ನಲ್ಲಿ ಎರಡು ಪ್ರಬಲ ಪಕ್ಷಗಳೊಂದಿಗೆ ತ್ರಿಕೋನ ಸ್ಪರ್ಧೆಗೆ ಮುಂದಾಗಿದೆ. ಗುಜರಾತ್ನಲ್ಲಿ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷ, ಜನತೆಗೆ ಕಲ್ಯಾಣದ ಭರವಸೆ ನೀಡುತ್ತಿದೆ.
ಗುಜರಾತ್ ರಣಕಣದಲ್ಲಿ ಪಕ್ಷದ ಸ್ಪರ್ಧೆ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿರುವ ಎಎಪಿ ರಾಷ್ಟ್ರೀಯ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಸಿಎಂ ಅಭ್ಯರ್ಥಿ ಇಸುದಾನ್ ಗಾದ್ವಿ, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಎಎಪಿ ಜನರ ಕಲ್ಯಾಣದ ಭರವಸೆಯನ್ನು ನೀಡುತ್ತಿದೆ. ಗುಜರಾತ್ನಲ್ಲಿ ಪವರ್ಕಟ್ ಪ್ರಮುಖ ಸಮಸ್ಯೆಯಾಗಿದ್ದು, ಈ ಸಮಸ್ಯೆ ಆಧಾರದ ಮೇಲೆ ಮತದಾರರ ಸೆಳೆಯಲು ಮುಂದಾಗಿದೆ.
ಪ್ರಶ್ನೆ: ಅರವಿಂದ ಕೇಜ್ರಿವಾಲ್ ಕಳೆದ ಮೂರು ತಿಂಗಳಿನಿಂದ ಗುಜರಾತ್ ಚುನಾವಣೆಗೆ ಸಿದ್ದತೆ ನಡೆಸಿರುವ ನೀವು, ಎಷ್ಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹೊಂದಿದ್ದೀರಾ?
ಅ.ಕೇ: ನಾವು ನೀಡುತ್ತಿರುವ ಭರವಸೆ ಬಗ್ಗೆ ಗುಜರಾತ್ ಜನರು ಆಸಕ್ತಿ ಹೊಂದಿದ್ದಾರೆ. ಇದೇ ಮೊದಲ ಬಾರಿ ರಾಜಕೀಯ ಪಕ್ಷವೊಂದು ಹಣದುಬ್ಬರ ಕೊನೆಗೊಳಿಸುವ ಭರವಸೆ ನೀಡಿದೆ. ಇದು ಜನರ ಪ್ರಮುಖ ಸಮಸ್ಯೆಯಾಗಿದ್ದು, ಪ್ರತಿಯೊಬ್ಬರೂ ಇದರ ನಿರ್ವಹಣೆಯಲ್ಲಿ ಯಶಸ್ವಿಯಾಗುತ್ತಿಲ್ಲ.
ನಾವು ಅಧಿಕಾರಕ್ಕೆ ಬಂದರೆ ಮಾರ್ಚ್ 1ರಿಂದ ಎಲೆಕ್ಟ್ರಿಸಿಟಿ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದೇವೆ. ಇದರಿಂದ ಜನಸಾಮಾನ್ಯರಿಗೆ ಲಾಭವಾಗಲಿದೆ. ಜನರಿಗೆ ವಿದ್ಯುತ್ ಬಿಲ್ ಹಣ ಉಳಿತಾಯವಾಗಲಿದೆ. ದೆಹಲಿಯಲ್ಲೂ ನಾವು ಎಲ್ಲಾ ವಿದ್ಯುತ್ ಬಿಲ್ ಹೊರೆಯನ್ನು ಜನಸಾಮಾನ್ಯರಿಗೆ ನೀಡಿಲ್ಲ. ಅದೇ ರೀತಿ ಪಂಜಾಬ್‌ನಲ್ಲಿ ಕೂಡ. ದೆಹಲಿಯಲ್ಲಿ ಶಾಲೆಗಳು ಉತ್ತಮ ಮಟ್ಟದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವು ಗುಜರಾತ್ನಲ್ಲೂ ಉತ್ತಮ ಸಂಸ್ಥೆಗಳ ನಿರ್ಮಾಣ ಮಾಡುತ್ತೇವೆ.
ಪ್ರಶ್ನೆ: ಆಮ್ ಆದ್ಮಿ ಪಕ್ಷ ಗುಜರಾತ್ನಲ್ಲಿ ಎಷ್ಟು ಸ್ಥಾನ ಗೆಲ್ಲಲಿದೆ? ಯಾರ ಆಡಳಿತ ಇಲ್ಲಿ ಅಧಿಕಾರಕ್ಕೆ ಬರಲಿದೆ?
ಅ.ಕೇ: ಏಕಪಕ್ಷದ ಆಡಳಿತ ಇಲ್ಲಿ ಬರಲಿದೆ. ಜನತೆ ನಿರ್ಧಾರದಂತೆ ಸ್ಥಾನ ಗೆಲ್ಲಲ್ಲಿದ್ದು, ನಾವು ಸರ್ಕಾರ ರಚಸುವ ಭರವಸೆಯನ್ನು ಹೊಂದಿದ್ದೇವೆ.
ಪ್ರಶ್ನೆ: ಸೌರಾಷ್ಟ್ರ ಅಥವಾ ದಕ್ಷಿಣ ಗುಜರಾತ್, ಎಲ್ಲಿ ಹೆಚ್ಚಿನ ಸ್ಥಾನವನ್ನು ಎಎಪಿ ಪಡೆಯಲಿದೆ?
ಅ. ಕೇ: ಸೌರಾಷ್ಟ್ರ ಅಥವಾ ದಕ್ಷಿಣ ಗುಜರಾತ್ ಎಂದು ಸೀಮಿತ ಮಾಡದೇ, ನಾವು ಒಟ್ಟಾರೆ ಗುಜರಾತ್ನಿಂದ ಮತ ಪಡೆಯುತ್ತೇವೆ.
ಪ್ರಶ್ನೆ: ಹಳೆಯ ಪೆನ್ಷನ್ ಪ್ಲಾನ್ ಅನ್ನು ಅಳವಡಿಸುವ ಯೋಚನೆ ಇದೆಯಾ?
ಅ.ಕೆ: ಪಂಜಾಬ್‌ನಲ್ಲಿ ಇದನ್ನು ಅಳವಡಿಸಲಾಗಿದೆ. ಕ್ಯಾಬಿನೆಟ್ ವಿರೋಧವಿಲ್ಲದೇ ಒಪ್ಪಿಗೆ ನೀಡಿದಾಗ ಇದು ಜಾರಿಗೆ ಬರುತ್ತದೆ. ನಾವು ಗುಜರಾತ್ನಲ್ಲಿ ಸರ್ಕಾರ ರಚನೆ ಮಾಡಿದರೆ, ತಿಂಗಳೊಳಗೆ ಹಳೆಯ ಪೆನ್ಶನ್ ಯೋಜನೆ ಜಾರಿಗೆ ತರುವ ಭರವಸೆಯನ್ನು ಗುಜರಾತ್ ಸರ್ಕಾರಿ ಉದ್ಯೋಗಿಗಳಿಗೆ ನೀಡುತ್ತೇನೆ.
ಪ್ರಶ್ನೆ: ಪಂಜಾಬ್ ಮತ್ತು ಗುಜರಾತ್ ಚುನಾವಣೆಯಲ್ಲಿ ಏನು ವ್ಯತ್ಯಾಸ ಕಾಣುತ್ತಿದೆ?
ಅ.ಕೇ: ಜನರ ಸಮಸ್ಯೆಗಳು ಸಾರ್ವತ್ರಿಕವಾದದ್ದು. ಒಬ್ಬ ವ್ಯಕ್ತಿ ತನ್ನ ಮಕ್ಕಳಿಗೆ ಉತ್ತಮ ಕೆಲಸ ಸಿಗಬೇಕು ಎಂದು ಆಶಿಸುತ್ತಾನೆ. ಎಲ್ಲೇ ಹೋದರೂ ನೀವು ನಿರುದ್ಯೋಗ, ಹಣದುಬ್ಬರ ಕಾಣಬಹುದು. ಇದರ ನಿರ್ಮೂಲನೆಯನ್ನು ನಮ್ಮ ಪಕ್ಷ ಮಾಡುತ್ತದೆ. ಇತರೆ ಪಕ್ಷಗಳು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತವೆ ಅಷ್ಟೇ ಎಂದು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದರು.
ನೀವು ರಾಜಕೀಯ ಮಾಡಬೇಕು ಎಂದರೆ, ರಾಜಕೀಯ ಮಾಡಬೇಕು ಎಂದರೆ ಅವರ ಜೊತೆ ಹೋಗಿ. ಉತ್ತಮ ಶಾಲೆಗಳು, ಆಸ್ಪತ್ರೆಗಳು, ಉಚಿತ ವಿದ್ಯುತ್ ಬೇಕು ಎಂದರೆ ನನ್ನ ಬಳಿ ಬನ್ನಿ ಎಂದರು.
ಪ್ರಶ್ನೆ: ಗಾದ್ವಿ, ರೈತರ ಆದಾಯ ಮೂರು ಪಟ್ಟು ಮಾಡುವ ಬಗ್ಗೆ ಭರವಸೆ ನೀಡಲಾಗುತ್ತಿದೆ. ರೈತರ ಆಧಾಯ ಮತ್ತು ಹಣ ದುಬ್ಬರ ನಿಯಂತ್ರಣಕ್ಕೆ ಏನು ಮಾಡುತ್ತೀರಾ?
ಗಾದ್ವಿ: 2017ರಲ್ಲಿ ಬಿಜೆಪಿ ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ನೀಡಿತ್ತು. 2022ರಲ್ಲಿ ನಾವಿದ್ದೇವೆ. ಆದಾಯ ಮಾತ್ರ ದ್ವಿಗುಣಗೊಂಡಿಲ್ಲ. ಆದರೆ ವೆಚ್ಚ ಮಾತ್ರ ದ್ವಿಗುಣಗೊಂಡಿದೆ. 53 ಲಕ್ಷ ರೈತರು ಉತ್ತಮ ಬೆಲೆಯನ್ನು ಪಡೆಯುತ್ತಿಲ್ಲ. ಅವರಿಗೆ ವಿದ್ಯುತ್ ಅಥವಾ ನೀರು ಸಿಗುತ್ತಿಲ್ಲ. ಹೆಚ್ಚುವರಿಯಾಗಿ ಅನೇಕ ಕಾನೂನು ನಿಯಮಗಳನ್ನು ಮಾಡಿ ಅವರಿಗೆ ಇದರಿಂದ ಹೊರಬರದಂತೆ ಮಾಡಲಾಗಿದೆ.
ಯುವ ಜನತೆ ಬಿಜೆಪಿಯನ್ನು ನಂಬಬಾರದು. ಪ್ರಶ್ನೆ ಪತ್ರಿಕೆ ಸೋರಿಕೆ, ಕೋಟಿ ರೂಗಳಿಗೆ ಪೇಪರ್ ಮಾರಾಟ ಮಾಡಲಾಗುತ್ತಿದೆ. ಈ ಹಣವನ್ನು ಚುನಾವಣೆಗೆ ಈಗ ಬಳಕೆ ಮಾಡಲಾಗುತ್ತಿದೆ. ಇಡೀ ಗುಜರಾತ್ಗೆ ಬಿಜೆಪಿ ನಿರಾಸೆ ಮೂಡಿಸಿದೆ. 27 ವರ್ಷದಿಂದ ಬಿಜೆಪಿ ಅಧಿಕಾರ ನಡೆಸುತ್ತಿದ್ದು, ಇನ್ನು ಐದು ವರ್ಷ ಬಿಜೆಪಿಗೆ ನೀವು ಅವಕಾಶ ನೀಡಿದರೆ ಏನಾಗಬಹುದು? ಎಂದು ಊಹಿಸಿ. ಯಾವುದೇ ಟೆಂಡರ್ ನೀಡದೇ ಮೊರ್ಬಿ ಸೇತುವೆ ನಿರ್ಮಾಣದಿಂದ 150 ಜನ ಸಾವನ್ನಪ್ಪಿದರು. ಆದರೂ ಅಧಿಕಾರಿಗಳು ಏನನ್ನೂ ಮಾಡಲಿಲ್ಲ.
ಪ್ರಶ್ನೆ: ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತ ಕಸಿಯಲಿದೆ ಎನ್ನಲಾಗುತ್ತಿದೆ. ಎಎಪಿ ವೋಟ್ ಬ್ಯಾಂಕ್ ಯಾವುದು?
ಅ.ಕೇ: ಕಾಂಗ್ರೆಸ್ಗೆ ಮತ ಹಾಕಬೇಡಿ ಎಂದು ಈ ಮೂಲಕ ಹೇಳುತ್ತೇನೆ. ಕಾಂಗ್ರೆಸ್ಗೆ ಮತ ಹಾಕುವುದು ನಿಮ್ಮ ಮತ ವ್ಯರ್ಥವಾದಂತೆ. ಕಸದ ಬುಟ್ಟಿಗೆ ಹೋದಂತೆ. ಪ್ರಮುಖ ವಿಷಯ ಎಂದರೆ ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದಿಲ್ಲ. ಎಎಪಿ ಸರ್ಕಾರ ರಚಿಸಲಿದೆ.
ಕಾಂಗ್ರೆಸ್ನಿಂದ ಗೆದ್ದ ವ್ಯಕ್ತಿ ಬಿಜೆಪಿ ಸೇರುತ್ತಾನೆ. ಕಾಂಗ್ರೆಸ್ಗೆ ಮತ ಹಾಕುವುದು ಎಂದರೆ ಬಿಜೆಪಿಗೆ ಮತ ಹಾಕಿದಂತೆ. ಕಾಂಗ್ರೆಸ್ಗೆ ಮತ ಹಾಕುವವರು ಎಎಪಿಗೆ ಮತ ಹಾಕಬೇಕು. ನೀವು ಸ್ವಲ್ಪ ಬೆಂಬಲ ನೀಡಿದರೂ ನಾವು ಭಾರಿ ಬಹುಮತದಿಂದ ದೃಢ ಮತ್ತು ಸ್ಥಿರ ಸರ್ಕಾರ ರಚನೆ ಮಾಡುವ ಭರವಸೆಯನ್ನು ಹೊಂದಿದ್ದು, ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ.
ಇದನ್ನೂ ಓದಿ: ಶ್ರದ್ಧಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಶಿವಸೇನೆಯ ಸಂಜಯ್ ರಾವತ್ ಆಗ್ರಹ